ಕರ್ನಾಟಕದಲ್ಲಿ 'ಈ' ವಯಸ್ಸಿನವರಿಗೆ ಕೊರೊನಾವೈರಸ್ ಅಂಟಿದ್ರೆ ಬಲುಕಷ್ಟ!
ಬೆಂಗಳೂರು, ಜೂನ್.23: ಕೊರೊನಾವೈರಸ್ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಇಡೀ ಭಾರತಕ್ಕೆ ಕರ್ನಾಟಕವು ಮಾದರಿಯಾಗಿ ನಿಂತಿತ್ತು. ಆದರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಜಾರಿ ಹೋಗುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ ಪ್ರತಿಯೊಬ್ಬರಲ್ಲೂ ಆತಂಕವನ್ನು ಹುಟ್ಟುಹಾಕಿದೆ. ರಾಜ್ಯದಲ್ಲಿ ಪ್ರತಿನಿತ್ಯ 250ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ 9399ಕ್ಕೆ ಏರಿಕೆಯಾಗಿದೆ.
ಬೆಂಗಳೂರಿಗೆ ಕೊರೊನಾಘಾತ!, 484 ಡೇಂಜರ್ ಜೋನ್ಸ್!
ಕೊರೊನಾವೈರಸ್ ಅಟ್ಟಹಾಸಕ್ಕೆ ರಾಜ್ಯದಲ್ಲಿ ಸೋಮವಾರದ ಅಂಕಿ-ಅಂಶಗಳ ಪ್ರಕಾರ 142 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 80 ಕೊರೊನಾವೈರಸ್ ಸೋಂಕಿತರು ನಿಗದಿತ ಆಸ್ಪತ್ರೆಯ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಮಧ್ಯೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಡಿರುವ ಟ್ವೀಟ್ ಮತ್ತಷ್ಟು ಆತಂಕವನ್ನು ಹುಟ್ಟು ಹಾಕಿದೆ.
|
ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ನಲ್ಲಿ ಇರುವುದೇನು?
"ಹಿರಿಯ ನಾಗರಿಕರಿಗೆ ನೊವೆಲ್ ಕೊರೋನಾ ಸೋಂಕು ತಗುಲಿದರೆ ಅಪಾಯ ಹೆಚ್ಚು. ರಾಜ್ಯದ ಒಟ್ಟು ಸೋಂಕಿತರಲ್ಲಿ ಶೇ16.24ರಷ್ಟು ಜನ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಮರಣ ಪ್ರಮಾಣದಲ್ಲಿ ಶೇ.78.87ರಷ್ಟು ಜನ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದ್ದರಿಂದ ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ, ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

80 ಕೊರೊನಾವೈರಸ್ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಪ್ರತಿನಿತ್ಯ ಏರಿಕೆ ಕಂಡು ಬರುತ್ತಿದೆ. ರಾಜ್ಯದ ವಿವಿಧಡೆ ಕೊರೊನಾವೈರಸ್ ಸೋಂಕಿತರಿಗೆ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರ - 38, ಕಲಬುರಗಿ - 13, ಧಾರವಾಡ - 6, ಬಳ್ಳಾರಿ - 4, ತುಮಕೂರು - 4, ಬೀದರ್ -3, ದಾವಣಗೆರೆ - 2, ಉಡುಪಿ - 2, ರಾಮನಗರ - 2, ದಕ್ಷಿಣ ಕನ್ನಡ -2, ಹಾಸನ - 1, ಹಾವೇರಿ - 1, ಬೆಳಗಾವಿ - 1, ರಾಯಚೂರು - 1 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಕಂಟೇನ್ಮೆಂಟ್ ಝೋನ್
ಕೊರೊನಾವೈರಸ್ ಸೋಂಕಿನಿಂದ ಬೆಂಗಳೂರಿಗರಿಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ಸಿಲಿಕಾನ್ ಸಿಟಿಯಲ್ಲಿ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ ರೂಮ್ ನೀಡಿರುವ ಮಾಹಿತಿ ಪ್ರಕಾರ ಸೋಮವಾರದ ಎಣಿಕೆಯಂತೆ 484 ಕಂಟೇನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗಿದೆ. ಇದರ ನಡುವೆ ಕೊರೊನಾವೈರಸ್ ರೋಗದ ಲಕ್ಷಣಗಳಿಲ್ಲದವರಿಗೂ ಸೋಂಕು ದೃಢಪಟ್ಟಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಅಲ್ಲದೇ ILI, SARI ಲಕ್ಷಣ ಇರುವವರಿಗೆ (ಶೇ.32) ಕೊರೊನಾವೈರಸ್ ಸೋಂಕು ತಗುಲಿದೆ.

ಜೂ.22ರಂದು 249 ಮಂದಿಗೆ ಕೊರೊನಾವೈರಸ್
ಕರ್ನಾಟಕದಲ್ಲಿ ಜೂನ್.22ರ ಸೋಮವಾರ ಒಟ್ಟು 249 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 126 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಕಲಬುರಗಿ - 27, ವಿಜಯಪುರ - 15, ಉಡುಪಿ - 14, ದಕ್ಷಿಣ ಕನ್ನಡ -12, ದಾವಣಗೆರೆ - 9, ಉತ್ತರ ಕನ್ನಡ -6, ಬಾಗಲಕೋಟೆ -6, ಬೀದರ್ -5, ಚಿಕ್ಕಮಗಳೂರು - 5, ಧಾರವಾಡ - 4, ಬೆಂಗಳೂರು ಗ್ರಾಮಾಂತರ - 4, ರಾಮನಗರ - 3, ಚಿತ್ರದುರ್ಗ - 2, ಕೋಲಾರ - 2, ತುಮಕೂರು - 2, ಕೊಡಗು -2, ಯಾದಗಿರಿ - 1, ಮೈಸೂರು -1, ಚಿಕ್ಕಬಳ್ಳಾಪುರ -1, ಗದಗ -1, ಕೊಪ್ಪಳ - 1 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.