ಬೆಂಗಳೂರಿನಲ್ಲಿ ಮೂರು ದಿನದ ಮಳೆಗೆ 75 ಕೆರೆ ಭರ್ತಿ, ಯಾವ ಭಾಗದಲ್ಲಿ ಹೆಚ್ಚು ಹಾನಿ ?
Rain in Bengaluru: ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿದ ಮಳೆಗೆ ಬರೋಬ್ಬರಿ 75ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 183 ಕೆರೆಗಳು ಬರಲಿವೆ. ಇದೀಗ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಲೇ ಈಗಾಗಲೇ ಸುಮಾರು 75 ಕೆರೆಗಳು ಭರ್ತಿಯಾಗಿವೆ. ತುಂಬಿರುವ ಎಲ್ಲಾ ಕೆರೆಗಳ ಹೊರ ಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಜೊತೆಗೆ ಕಾಲುವೆಗಳಲ್ಲಿ ತುಂಬಿರುವ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರಿನ ಯಾವ ಭಾಗದಲ್ಲಿ ಮಳೆ ಅವಾಂತರ ಹೆಚ್ಚಾಗಿ ಆಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮೇ 20 ರಿಂದ ಮೇ 22 ರವರೆಗೆ ಮೂರು ದಿನಗಳು ಭಾರೀ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 'ಯೆಲ್ಲೊ ಅಲರ್ಟ್' ಸಹ ಘೋಷಿಸಲಾಗಿದೆ. ಇದೀಗ ಮಳೆ ಅವಾಂತರದ ನಂತರ ಬಿಬಿಎಂಪಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಅಧಿಕಾರಿಗಳು ಸದಾ ಸನ್ನದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ ಎಚ್ಚರಿಕೆಯಿಂದಿದ್ದು, ಏನಾದರೂ ಸಮಸ್ಯೆಯಿದ್ದಲ್ಲಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ- 1533 ಗೆ ಕರೆ ಮಾಡಿ ದೂರು ನೀಡಬೇಕು ಎಂದು ಕೇಳಲಾಗಿದೆ.

ರಾಜರಾಜೇಶ್ವರಿ ನಗರ ವಲಯ: ಬೆಂಗಳೂರಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿರುವ ಪ್ರದೇಶಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಪ್ರಮುಖವಾಗಿದೆ. ನಗರದ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಅಂದರಹಳ್ಳಿ ಮುಖ್ಯ ರಸ್ತೆ ಸಮೀಪದ ಜನನಿ ಶಾಲೆಯ ಬಳಿ ತಡೆಗೋಡೆ ಕುಸಿದಿದ್ದು, ರಸ್ತೆ ಬದಿಯಿರುವ ಚರಂಡಿ ದುರಸ್ತಿಯಾಗಿದೆ. ಅಲ್ಲದೆ ವಿದ್ಯುತ್ ಕಂಬ ಕೂಡ ಬಿದ್ದಿದೆ. ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟೀಸ್ ನೀಡಲು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ಇಲ್ಲಿನ ಜವರೇಗೌಡನದೊಡ್ಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಡ್‌ಡ್ರೈನ್ ಗಳು ಬ್ಲಾಕ್ ಆಗಿದ್ದು, ಪರಿಣಾಮ ನೀರು ನಿಂತು ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ನಿರ್ದಿಷ್ಟ ಭಾಗವನ್ನು ಕತ್ತರಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೈಡ್ ಡ್ರೈನ್‌ಗಳ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಇಲ್ಲಿನ ವಿದ್ಯಾಮಂದಿರ ಸ್ಕೂಲ್ ಸಮೀಪದ ರಸ್ತೆಯ ಅರ್ಧ ಭಾಗ ಒತ್ತುವರಿ ಮಾಡಿಕೊಂಡು ಗೋಡೆ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಸ್ಥಳದಲ್ಲೇ ಜೆ.ಸಿ.ಬಿ. ಯನ್ನು ತರಿಸುವ ಮೂಲಕ ಗೋಡೆ ತೆರವು ಮಾಡಲಾಗಿದೆ. ವಿಪತ್ತು ನಿರ್ವಹಣೆ ಅಡಿ ಕೂಡಲೇ ಕಚ್ಚಾ ಡ್ರೈನ್ ನಿರ್ಮಾಣ ಮಾಡಿ ನೀರು ಹರಿದು ಹೋಗುವಂತೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಮಹದೇವಪುರ ವಲಯ: ಮಹದೇವಪುರ ವಲಯದ ಸಾಯಿ ಲೇಔಟ್ ಗೆ ವಲಯ ಆಯುಕ್ತರಾದ ರಮೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನ ಪ್ರಮಾಣ ಶೇ. 80 ರಷ್ಟು ಕಡಿಮೆಯಾಗಿದ್ದು, ಇಂದು ಮಳೆ ಬರದಿದ್ದರೆ ಸಂಪೂರ್ಣವಾಗಿ ನೀರು ಹೊರಹೋಗಲಿದೆ. ಚರಂಡಿಗಳ ಸ್ಲ್ಯಾಬ್ ತೆಗೆದು ಜೆ.ಸಿ.ಬಿ ಹಾಗೂ ಸಿಬ್ಬಂದಿಗಳ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ.
ಪಾಲಿಕೆ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳದಲ್ಲಿ 1 ಜೆ.ಸಿ.ಬಿ, 2 ಟ್ರ್ಯಾಕ್ಟರ್, 2 ಹೆಚ್.ಪಿ ಪಂಪ್ ಸೆಟ್ ಗಳಿದ್ದು, 16 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಸಮಸ್ಯೆಯಾಗಿದೆ. ಮಳೆ ಕಡಿಮೆಯಾದರೆ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗಲಿದೆ. ಸ್ಥಳೀಯ ನಿವಾಸಿಗಳಿಗೆ ದಿನದ ಮೂರು ಹೊತ್ತು ತಿಂಡಿ/ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸಾಯಿ ಲೇಔಟ್ ಪ್ರದೇಶ ಜಲಾವೃತವಾಗಿರುವ ಪರಿಣಾಮ ಇಂದು ನಿವಾಸಿಗಳಿಗಾಗಿ ಪಾಲಿಕೆಯ ಆರೋಗ್ಯ ವಿಭಾಗದಿಂದ 'ಆರೋಗ್ಯ ಶಿಬಿರ' ವನ್ನು ಆಯೋಜಿಸಿದ್ದು, ನಿವಾಸಿಗಳಿಗೆ ಪರೀಕ್ಷೆ ಮಾಡಿ ಔಷಧ ಹಾಗೂ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಬೊಮ್ಮನಹಳ್ಳಿ ವಲಯ: ಇನ್ನು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲೂ ಮಳೆ ಅವಾಂತರ ಮುಂದುವರಿದಿದೆ. ಇಲ್ಲಿ ಎಚ್ಎಸ್‌ಆರ್, ಅನುಗ್ರಹ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗಿರುವ ಪ್ರದೇಶಗಳಲ್ಲಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರು ತೆರವು ಮಾಡಲಾಗಿದೆ.
ಪಶ್ಚಿಮ ವಲಯ: ಕೆ.ಆರ್ ಮಾರುಕಟ್ಟೆ ಹಾಗೂ ಬೇಲಿಮಠ ರಸ್ತೆಗೆ ಅಧಿಕಾರಿಗಳೊಂದಿಗೆ ಪಶ್ಚಿಮ ವಲಯದ ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್ ಮಾರುಕಟ್ಟೆ ಪಾರ್ಕಿಂಗ್ ಸ್ಥಳದಲ್ಲಿ ನೀರು ನಿಂತಿದೆ. ಅದನ್ನು ತೆರವುಗೊಳಿಸಲು ಸೂಚಿಸಿದರು. ರಸ್ತೆಗಳಲ್ಲಿ ಜಲಾವೃತವಾಗುವ ಪ್ರದೇಶಗಳ ಮೇಲೆ ಹೆಚ್ಚು ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣ ವಲಯ: ಇಲ್ಲಿನ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ಹಾಗೂ ಮೆಟ್ರೋ ಕಾಮಗಾರಿಯಿಂದಾಗಿ ನೀರಿನ ಹರಿವು ಸರಿಯಾಗಿ ಹೋಗಲು ಜಾಗ ಇಲ್ಲದೆ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಹೀಗಾಗಿ ಈ ಭಾಗದ ರಸ್ತೆ ಜಲಾವೃತವಾಗುತ್ತಿದೆ. ಈ ಸಂಬಂಧ ಸಾರಿಗೆ ಸಚಿವರು ಹಾಗೂ ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿರುವ ಪರಿಣಾಮ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತವಾಗಿದೆ. ಈ ಜಂಕ್ಷನ್‌ನಲ್ಲಿ ರಾಜಕಾಲುವೆಯ ಪುನರ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಮೆಟ್ರೋ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಜಲಾವೃತವಾಗುವುದನ್ನು ತಪ್ಪಿಸಲು ಪಾಲಿಕೆ ಮುಂದಾಗಿದೆ.
ಇನ್ನು ಕೆ.ಎ.ಎಸ್ ಆಫಿಸರ್ಸ್ ಲೇಔಟ್ ನಲ್ಲಿ ಕಾಲುವೆಯ ನಿರ್ಮಾಣ ಮಾಡಬೇಕಿದೆ. ಈ ಸ್ಥಳದಲ್ಲಿ ಖಾಸಗಿ ಸ್ಥಳ ಬರಲಿದೆ. ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಈ ಸಂಬಂಧ ವಿಪತ್ತು ನಿರ್ವಹಣೆ ಅಡಿ ತಾತ್ಕಾಲಿಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ನಂತದ ಶಾಶ್ವತ ಕಾಲುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಧರೆಗುರುಳಿದ ಮರಗಳ ತೆರವು: ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ 25 ಮರಗಳು, 44 ಮರದ ರೆಂಬೆ/ಕೊಂಬೆಗಳು ಧರೆಗುರುಳಿರುವ ದೂರುಗಳು ದಾಖಲಾಗಿದ್ದು, ಈವರೆಗೆ 10 ಮರಗಳು ಹಾಗೂ 25 ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಉಳಿದ ಮರ, ಮರದ ರೆಂಬೆ/ಕೊಂಬೆಗಳ ತೆರವು ಕಾರ್ಯಾಚರಣೆಯಲ್ಲಿ ಮರ ತೆರವುಗೊಳಿಸಲಾಗುತ್ತಿದೆ.
ಬಿಬಿಎಂಪಿ ಎಲ್ಲಾ ವಲಯಗಳಲ್ಲಿ ಜನರಿಂದ ನಿಯಂತ್ರಣ ಕೊಠಡಿಗಳಿಗೆ ಬಂದಂತಹ ದೂರುಗಳಿಗೆ ಕೂಡಲೇ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು. ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕಾರ್ಯಪ್ರವೃತ್ತವಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಪಾಲಿಕೆಯ ಎಲ್ಲಾ 8 ವಲಯಗಳ ವ್ಯಾಪ್ತಿಯ ಅಗ್ನಿ ಶಾಮಕ ಠಾಣೆಗಳೊಂದಿಗೆ ವಲಯ ಆಯುಕ್ತರುಗಳು ಹಾಗೂ ಅಧಿಕಾರಿಗಳು ಸದಾ ಸಂಪರ್ಕದಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ವಾಹನಗಳನ್ನು ಬಳಸಿಕೊಳ್ಳಲು ಸೂಚಿಸಿದರು.
ಬಿಬಿಎಂಪಿ ವತಿಯಿಂದ ತೆಗೆದುಕೊಳ್ಳುತ್ತಿರುವ ಪ್ರಮುಖ ಕ್ರಮಗಳು
* 2024-25 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು "ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ" ಯೋಜನೆ ಅಡಿಯಲ್ಲಿ 2,000 ಕೋಟಿ ರೂ.ಗಳನ್ನು ಪಾಲಿಕೆಗೆ ಅನುದಾನ ಒದಗಿಸುತ್ತಿದ್ದು, ಈ ಯೋಜನೆ ಅಡಿಯಲ್ಲಿ ಬಾಕಿ ಇರುವ ಎಲ್ಲಾ 173.90 ಕಿ.ಮೀ ಉದ್ದ ಮಣ್ಣಿನ ಕಾಲುವೆಗಳಿಗೆ ಆರ್.ಸಿ.ಸಿ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ.
* ಕೆ.ಎಸ್.ಎನ್.ಡಿ.ಎಂ.ಸಿ ಸಂಸ್ಥೆಯ ವತಿಯಿಂದ ಹೆಚ್ಚುವರಿಯಾಗಿ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುವುದು.
* ಬೃಹತ್ ನೀರುಗಾಲುವೆಗಳ ಒತ್ತುವರಿಗಳನ್ನು ಪರಿಣಾಮಕಾರಿಯಾಗಿ ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
* ಹಾಲಿ ಬೆಂಗಳೂರು ನಗರದಲ್ಲಿರುವ ಕೆರೆಗಳಿಗೆ ತೂಬುಕಾಲುವೆಗಳನ್ನು ಅಳವಡಿಸಿ ಕರೆಗಳನ್ನು ಪ್ರವಾಹ ತಡೆಗಟ್ಟುವ ಸಾಧನಗಳಾಗಿ ಬಳಸಲು ಉದ್ದೇಶಿಸಲಾಗಿದೆ.












Click it and Unblock the Notifications