ಬೆಂಗಳೂರಿಗೆ ಬಂತು 50ನೇ ಮೆಟ್ರೋ ರೈಲು
ಬೆಂಗಳೂರು, ಮೇ 30 : ಬೆಂಗಳೂರು ನಗರದಲ್ಲಿ ಸಂಚರಿಸಲು ಮತ್ತೊಂದು ಮೆಟ್ರೋ ರೈಲು ಆಗಮಿಸಿದೆ. ಬಿಇಎಂಎಲ್ ಉತ್ಪಾದಿಸಿದ 50ನೇ ರೈಲನ್ನು ಬಿಎಂಆರ್ ಸಿಎಲ್ ಗೆ ಹಸ್ತಾಂತರಿಸಲಾಗಿದೆ. ಈ ರೈಲನ್ನು ಹಸ್ತಾಂತರಿಸುವ ಮೂಲಕ ನಮ್ಮ ಮೆಟ್ರೋ ನಿಗಮದ ಜೊತೆ ಬಿಇಎಂಎಲ್ ಮಾಡಿಕೊಂಡಿದ್ದ ಒಪ್ಪಂದ ಪೂರ್ಣಗೊಂಡಿದೆ.
ಗುರುವಾರ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಬಿಇಎಂಎಲ್ ನೀಡಿದ 50ನೇ ರೈಲನ್ನು ಬರಮಾಡಿಕೊಂಡರು. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಈ ರೈಲು ಏಳು ಮೆಟ್ರೋ ಕಾರುಗಳನ್ನು ಹೊಂದಿದೆ. ಗಂಟೆಗೆ 90 ಕಿ.ಮೀ ಓಡುವ ಸಾಮರ್ಥ್ಯ ಈ ರೈಲಿಗಿದೆ.

ಈ ಮೆಟ್ರೋ ರೈಲನ್ನು ಹಸ್ತಾಂತರಿಸುವ ಮೂಲಕ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಬೆಂಗಳೂರು ಮೆಟ್ರೋ ನಿಗಮದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಪೂರ್ಣಗೊಳಿಸಿದಂತಾಗಿದೆ ಎಂದು ಬಿಇಎಂಎಲ್ ಉತ್ಪಾದನಾ ವಿಭಾಗದ ನಿರ್ದೇಶಕ ಎನ್.ಎಂ. ಧೋಕೆ ಹೇಳಿದ್ದಾರೆ.
2002ರಲ್ಲಿ ಬಿಇಎಂಎಲ್ ಸಂಸ್ಥೆ ಮೆಟ್ರೋ ರೈಲು ಕಾರುಗಳ ಉತ್ಪಾದನೆಯನ್ನು ಆರಂಭಿಸಿತು. ದೆಹಲಿ, ಬೆಂಗಳೂರು ಹಾಗೂ ಜೈಪುರ ಮೆಟ್ರೋ ಯೋಜನೆಗಳಿಗೆ ಸಂಸ್ಥೆ ಇದುವರೆಗೂ 700 ಮೆಟ್ರೋ ಕಾರುಗಳನ್ನು ಪೂರೈಕೆ ಮಾಡಿದೆ. ಇದರಲ್ಲಿ ಬೆಂಗಳೂರು ಮೆಟ್ರೋ ಯೋಜನೆಗಾಗಿ 50 ರೈಲುಗಳನ್ನು ನೀಡಿದೆ.
ಬಿಇಎಂಎಲ್ ಸಂಸ್ಥೆ ಪೂರೈಕೆ ಮಾಡಿರುವ ಪ್ರತಿಯೊಂದು ಮೆಟ್ರೊ ರೈಲಿನಲ್ಲಿ 392 ಜನರು ಪ್ರಯಾಣ ಮಾಡಬಹುದಾಗಿದೆ. ಗಂಟೆಗೆ 90 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಈ ರೈಲುಗಳಿಗಿದೆ. ಸಂಸ್ಥೆ ತನ್ನ 50ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳುವ ಸಂದರ್ಭದಲ್ಲಿಯೇ ಬೆಂಗಳೂರಿಗೆ 50ನೇ ಮೆಟ್ರೋ ರೈಲನ್ನು ನೀಡಿದೆ.
ಹಸಿರು ಮಾರ್ಗದಲ್ಲಿ ಸಂಚಾರ : ಈ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ಪೀಣ್ಯದಿಂದ ಸಂಪಿಗೆ ರಸ್ತೆ ನಡುವಿನ 9.9 ಕಿ.ಮೀ ಮಾರ್ಗದಲ್ಲಿ ನಡೆಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಹೇಳಿದ್ದಾರೆ. ಈ ರೈಲಿನ ಆಗಮನದಿಂದ ನಮ್ಮ ಮೆಟ್ರೋ ಮೊದಲ ಹಂತದ ಯೋಜನೆಗೆ ಅಗತ್ಯವಿದ್ದ ಎಲ್ಲಾ ರೈಲುಗಳು ಬೆಂಗಳೂರಿಗೆ ಬಂದಂತಾಗಿದೆ.












Click it and Unblock the Notifications