ಬಿಬಿಎಂಪಿಗೆ ಮರಳಿದ 503 ಚ.ಮೀ ವಿಸ್ತೀರ್ಣ ಅಕ್ರಮ ಒತ್ತುವರಿ ಜಾಗ
ಬೆಂಗಳೂರು, ಜುಲೈ 14: ಬೆಳೆಯುತ್ತಿರುವ ರಾಜ್ಯ ರಾಜಧಾನಿಯಲ್ಲಿ ಅಕ್ರಮಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಜಾಗ ಒತ್ತವರಿ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತಿವೆ. ಇದೀಗ ಅಂತದ್ದೆ ಒತ್ತುವರಿ ಆಗಿದ್ದ ಬೃಹತ್ ಜಾಗವನ್ನು ಮರಳಿ ತನ್ನ ತೆಕ್ಕೆಗೆ ಬಿಬಿಎಂಪಿ ಪಡೆದುಕೊಂಡಿದೆ.
ನಗರದ ಮಹದೇವಪುರ ವಲಯ ವೈಟ್‌ಫೀಲ್ಡ್ ವಾರ್ಡ್‌ನ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಸುಮಾರು 503 ಚ.ಮೀ ವಿಸ್ತೀರ್ಣದ 5.35 ಕೋಟಿ ರೂ. ಮೌಲ್ಯದ ಸರ್ಕಾರಿ ಬಂಡಿದಾರಿ ಜಾಗ ಒತ್ತುವರಿ ಆಗಿತ್ತು. ಅದನ್ನು ಶನಿವಾರ ಬಿಬಿಎಂಪಿ ಅಧಿಕಾರಿಗಳು ಸಮ್ಮುಖದಲ್ಲಿ ಒತ್ತುವರಿಯನ್ನು ತೆರವುಗೊಳಿಸಿ ಬಿಬಿಎಂಪಿ ವಶಕ್ಕೆ ಪಡೆಯಲಾಯಿತು.

ಮಹದೇವಪುರ ವಲಯ ವೈಟ್‌ಫೀಲ್ಡ್ ವಾರ್ಡ್ ವ್ಯಾಪ್ತಿಯ ಐ.ಟಿ.ಪಿ.ಎಲ್ ಮುಖ್ಯ ರಸ್ತೆ ಯಿಂದ ಬ್ರಿಗೇಡ್ ಟೆಕ್‌ಪಾರ್ಕ್ ರಸ್ತೆಯನ್ನು ಬೆಂಗಳೂರು ಪೂರ್ವ ತಾಲ್ಲೂಕು ಕೆ.ಆರ್ ಪುರ ಹೋಬಳಿ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ.134/5 ರಲ್ಲಿನ ಸರ್ಕಾರಿ ಬಂಡಿದಾರಿ ಜಾಗದಲ್ಲಿ ಈ ಹಿಂದಿನಿಂದಲೂ ವಾಹನಗಳು ಸಂಚರಿಸುತ್ತಿದ್ದವು.
ಒತ್ತುವರಿ ಜಾಗದಲ್ಲಿ ತಿಂಗಳಿನಿಂದ ಕಿರಿ ಕಿರಿ
ಸರ್ವೆ ನಂ.134/5 ರ ಮಾಲೀಕರಾದ ಶ್ರೀ. ಬಿ. ರಾಮಚಂದ್ರ ನಾಯ್ಡು ಬಿನ್ ಶಕುಂತಲಬಾಯಿ ಅವರು ಸದರಿ ರಸ್ತೆಯನ್ನು ಆತಿಕ್ರಮಿಸಿಕೊಂಡು ಅಡ್ಡಲಾಗಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಿ ಕಳೆದ 2 ತಿಂಗಳುಗಳಿಂದ ಸಾರ್ವಜನಿಕರು ಹಾಗೂ ಯಾವುದೇ ವಾಹನಗಳು ಸಂಚರಿಸದಂತೆ ಅಡ್ಡಿಪಡಿಸಿದ್ದರು.
ಇನ್ನೂ ಈ ರಸ್ತೆಯಲ್ಲಿಯೇ ಖಾಸಗಿ ಹೋಟೆಲ್ ನಡೆಸಲು ಜಾಗವನ್ನು ಬಾಡಿಗೆಗೆ ನೀಡಿ ಹಣ ಪಡೆಯುತ್ತಿದ್ದ ಜಾಗವನ್ನು ಮಹದೇವಪುರ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳು, ತಹಸಿಲ್ದಾರ್ ಬೆಂಗಳೂರು ಪೂರ್ವ ತಾಲೂಕು ಕಛೇರಿಯ ಭೂಮಾಪಕರು, ರಾಜಸ್ವ ನಿರೀಕ್ಷಕರು ಹಾಗೂ ಸ್ಥಳೀಯ ವೈಟ್‌ಫೀಲ್ಡ್ ಪೊಲೀಸರುಗಳ ಸಹಯೋಗದೊಂದಿಗೆ ಈ ಜಾಗ ಒತ್ತುವರಿ ಆಗಿತ್ತು ಎನ್ನಲಾಗಿದೆ.

ಸುಮಾರು 503.03 ಚದರ ಮೀಟರ್ ವಿಸ್ತೀರ್ಣದ ರೂ.5.35 ಕೋಟಿ ಮೌಲ್ಯದ ಸರ್ಕಾರಿ ಬಂಡಿದಾರಿ ಜಾಗದ ಒತ್ತುವರಿಯನ್ನು ಬಿಬಿಎಂಪಿ ತೆರವುಗೊಳಿಸಿ, ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ವೆಟ್ ಮಿಕ್ಸ್ ಮಿಶ್ರಣವನ್ನು ಅಳವಡಿಸುವ ಕಾರ್ಯವನ್ನು ಸದರಿ ದಿನದಂದೇ ಮಾಡಲಾಗಿಯಿತು.
ಸರ್ಕಾರಿ ಜಾಗದಲ್ಲಿ ಬೃಹತ್ ಕಾಂಪೌಂಡ್
ಬಿ. ರಾಮಚಂದ್ರ ನಾಯ್ಡು ಬಿನ್ ಶಕುಂತಲಬಾಯಿ ರವರು ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ. 134/5 ರಲ್ಲಿನ ಸರ್ಕಾರಿ ಬಂಡಿದಾರಿ, ಸರ್ಕಾರಿ ಬಿ ಕರಾಬು ಜಾಗದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಿರುವುದನ್ನು ತಾಲ್ಲೂಕು ಭೂ ಮಾಪಕರು ನೀಡಿರುವ ಸರ್ವೆ ನಕ್ಷೆಯಲ್ಲಿ ಧೃಡಪಟ್ಟಿರುತ್ತದೆ.
ಆದ್ದರಿಂದ, ಈ ಬಾಬ್ತು ಸದರಿಯವರಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರಂತೆ ನೋಟೀಸ್ ನೀಡಿ ಒತ್ತುವರಿ ತೆರವು ಆದೇಶ ಜಾರಿ ಮಾಡಿ ಮುಂದಿನ ದಿನಗಳಲ್ಲಿ ಮೇಲ್ಕಂಡಂತೆ ಒತ್ತುವರಿದಾರರು ಸರ್ಕಾರಿ ಬಿ ಕರಾಬು ಬಂಡಿ ದಾರಿಯಲ್ಲಿ ಕಾಂಪೌಂಡ್ ಗೋಡೆಯನ್ನು ತೆರೆವುಗೊಳಿಸಿ ರಸ್ತೆ ಬದಿ ಚರಂಡಿಯನ್ನು ನಿರ್ಮಿಸಲಾಗುತ್ತದೆ ಎಂದು ಬಿಬಿಎಂಪಿ ಕಾರ್ಯಪಾಲಕ ಅಭಿಯಂತರಾದ ಉದಯ್ ಚೌಗುಲೆ ಅವರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications