ಬೆಂಗಳೂರು : ಬೀದಿನಾಯಿಗಳ ದಾಳಿ, 5 ವರ್ಷದ ಬಾಲಕ ಬಲಿ
ಬೆಂಗಳೂರು, ಜೂನ್ 25 : ಬೀದಿ ನಾಯಿಗಳ ದಾಳಿಯಿಂದಾಗಿ 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟ ಬಾಲಕನನ್ನು ದುರ್ಗೇಶ್ (5) ಎಂದು ಗುರುತಿಸಲಾಗಿದೆ. ಮಲ್ಲಪ್ಪ ಎಂಬುವವರ ಪುತ್ರ ದುರ್ಗೇಶ್ ಆಟವಾಡುವಾಗ 10ಕ್ಕೂ ಹೆಚ್ಚು ಬೀದಿ ನಾಯಿಗಳು ಆತನ ಮೇಲೆ ದಾಳಿ ಮಾಡಿವೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಅಜ್ಜೇನಗೌಡಪಾಳ್ಯದಲ್ಲಿ ದುರ್ಗೇಶ್ ವಾಸವಾಗಿದ್ದ. ಮಂಗಳವಾರ ಮಧ್ಯಾಹ್ನ ಆಚಾರ್ಯ ಕಾಲೇಜ್ ಹಿಂಭಾಗದಲ್ಲಿ ಪೋಷಕರು ಕೂಲಿ ಕೆಲಸ ಮಾಡುವ ಸ್ಥಳಕ್ಕೆ ಆತ ತೆರಳಿದ್ದ. ಅಲ್ಲಿ ಆಟವಾಡುತ್ತಿದ್ದಾಗ ಬೀದಿನಾಯಿಗಳು ಆತನ ಮೇಲೆ ದಾಳಿ ಮಾಡಿವೆ.

ಸಪ್ತಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಕಲಬುರಗಿ ಮೂಲದ ಮಲ್ಲಪ್ಪ ಕುಟುಂಬ ಕೂಲಿ ಕೆಲಸವನ್ನು ಅರಸಿಕೊಂಡು ಬೆಂಗಳೂರಿಗೆ ಬಂದಿತ್ತು.
ಮಕ್ಕಳ ಮೇಲೆ ಬೀದಿ ನಾಯಿ ದಾಳಿ : ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಎಚ್.ಡಿ.ಕೋಟೆಯಲ್ಲಿ ನಡೆದಿದೆ. ಯಶವಂತ್ (2), ರಜೈನ್ ಖಾನ್ (3) ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ.
ಶಿವಾಜಿ ರಸ್ತೆಯಲ್ಲಿ ಅಕ್ರಮವಾಗಿ ದನ ಕತ್ತರಿಸಿ ಮಾಂಸ ಮಾರಾಟ ಮಾಡಲಾಗುತ್ತಿದ್ದು, ಮಾಂಸದ ರುಚಿಗೆ ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಜನರು ಆರೋಪಿಸುತ್ತಿದ್ದಾರೆ.












Click it and Unblock the Notifications