ಬೆಂಗಳೂರು: ಸುಖಾಸುಮ್ಮನೆ ನೀರು ದುರ್ಬಳಕೆ ಮಾಡಿದ್ರೆ ಬೀಳತ್ತೆ ಬರೋಬ್ಬರಿ ₹5,000 ದಂಡ ವಿಧಿಸುವ ವಾರ್ನಿಂಗ್, ಎಲ್ಲಿ?
ಬೆಂಗಳೂರು, ಮಾರ್ಚ್, 06: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲೇ ಇದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಶಾಖಕ್ಕೆ ಜನರು ಬೇಸತ್ತು ಕೋಗಿದ್ದಾರೆ. ಅಲ್ಲದೆ ನಗರದಲ್ಲಿ ಈಗಾಗಲೇ ನೀರಿನ ಅಭಾವ ಕಾಡುತ್ತಿದೆ. ಆದ್ದರಿಂದ ಬೆಂಗಳೂರಿನ ಈ ಅಪಾರ್ಟ್‌ಮೆಂಟ್ ಯಾರೂ ನೀರನ್ನು ಸುಮ್ಮನೆ ದುರ್ಬಳಕೆ ಮಾಡುತ್ತಾರೋ ಅಂತಹವರ ವಿರುದ್ಧ ಸಮರ ಸಾರಲು ಮುಂದಾಗಿದೆ. ಹಾಗಾದರೆ ಆ ಕಠಿಣ ಕ್ರಮ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದಲ್ಲಿ ನೀರಿನ ಅಭಾವ ನಗರ ವಾಸಿಗಳಿಗೆ ದಿನದಿನಕ್ಕೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಪರಿಹಾರ ಉಪಕ್ರಮಗಳ ನಡುವೆಯೂ, ಬೆಂಗಳೂರು ಮಹಾನಗರದ ಹಲವು ಪ್ರದೇಶಗಳಲ್ಲಿ ಜನಜೀವನ ತೀವ್ರ ಅತಂತ್ರ ಸ್ಥಿತಿಗೆ ತಲುಪಿದೆ. ಇನ್ನು ನೀರಿನ ಟ್ಯಾಂಕರ್‌ಗಳನ್ನು ಆಶ್ರಯಸಿದ್ದವರಿಗೆ ಟ್ಯಾಂಕರ್ ನೀರು ಕೂಡ ಸಿಗದಂತಾಗಿದೆ. ಈ ನಡುವೆ, ಅಪಾರ್ಟ್‌ಮೆಂಟ್‌ಗಳು ವಿದಿಸುತ್ತಿರುವ ಕಠಿಣ ಕ್ರಮಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ.

ನಗರದ ವೈಟ್‌ಫೀಲ್ಡ್ ಪ್ರದೇಶದ ಹೌಸಿಂಗ್ ಸೊಸೈಟಿ ಕುಡಿಯುವ ನೀರಿನ ದುರ್ಬಳಕೆ ಯಾರು ಮಾಡುತ್ತಾರೋ ಅಂತಹವರಿಗೆ 5,000 ರೂಪಾಯಿ ದಂಡ ವಿಧಿಸುವುದಾಗಿ ತನ್ನ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ಇದನ್ನು ಗಮನಿಸುವುದಕ್ಕೆ ಸೆಕ್ಯೂರಿಟಿ ಗಾರ್ಡ್ ಅನ್ನೂ ನಿಯೋಜಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಇಲ್ಲಿನ ಅಪಾರ್ಟ್‌ಮೆಂಟ್‌ನ ಈ ಕ್ರಮ ಭಾರೀ ಚರ್ಚೆಗೆ ಕಾರಣವಾಗಿದೆ.
ಸೂಕ್ತ ಕ್ರಮಗಳಿವು
* ಹೌಸಿಂಗ್ ಸೊಸೈಟಿಯ ಪ್ರತಿ ಮನೆಯವರೂ ನೀರಿನ ಬಳಕೆಯನ್ನು ಶೇಕಡಾ 20ರಷ್ಟು ಕಡಿಮೆ ಮಾಡಬೇಕು. ಇದು ಎಲ್ಲರೂ ಸೇರಿ ತೆಗೆದುಕೊಂಡ ತೀರ್ಮಾನವಾಗಿದೆ.
* ನೀರಿನ ಬಳಕೆಯನ್ನು ಶೇಕಡ 20ರಷ್ಟು ಕಡಿಮೆ ಮಾಡುವುದು ಸಾಧ್ಯವಾಗದೇ ಹೋದರೆ 5,000 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು.
* ನೀರಿನ ಪೂರೈಕೆಗೆ ಅನುಗುಣವಾಗಿ ನೀರಿನ ಲಭ್ಯತೆ ಇರಲಿದ್ದು, ಬೇಸಿಗೆಯ ಕೊನೇ ಹಂತದಲ್ಲಿ ನೀರಿನ ಬಳಕೆಯನ್ನು ಶೇಕಡ 40ರಷ್ಟು ಕಡಿಮೆ ಮಾಡಬೇಕಾಯಿತು.
* ನೀರಿನ ಬಳಕೆ ಕಡಿಮೆ ಮಾಡಿಸುವುದಕ್ಕೆ ಭದ್ರತಾ ಸಿಬ್ಬಂದಿ ನೇಮಕ ಮಾಡುತ್ತಿರುವುದಾಗಿಯೂ ಸೊಸೈಟಿ ಹೇಳಿದೆ.
ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು ಸಹ ತಮ್ಮ ನಿವಾಸಿಗಳಿಗೆ ತಮ್ಮ ದೈನಂದಿನ ನೀರಿನ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿವೆ. ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿರ್ಣಾಯಕ ಸಭೆ ನಡೆಸಿದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾನು ಅದನ್ನು ಗಂಭೀರವಾಗಿ ನೋಡುತ್ತಿದ್ದೇನೆ. ನಾನು ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನೀರು ಲಭ್ಯವಿರುವ ಸ್ಥಳಗಳನ್ನು ನಾವು ಗುರುತಿಸುತ್ತಿದ್ದೇವೆ. ಬೆಂಗಳೂರಿನಲ್ಲಿ 3,000ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿಹೋಗಿವೆ. ಮಾರ್ಚ್ 7ರ ಗಡುವಿನೊಳಗೆ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳದಿದ್ದರೆ, ಸರ್ಕಾರವು ಅವರ ಟ್ಯಾಂಕರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ರಾಜ್ಯದ ನೀರಿನ ಟ್ಯಾಂಕರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.












Click it and Unblock the Notifications