ಬೆಂಗಳೂರಿನಲ್ಲಿ ಒಂದು ದಿನದ ಖರ್ಚಿಗೆ ಕೇವಲ 300 ರೂಪಾಯಿ ಇದ್ರೆ ಸಾಕು: ಉಳಿತಾಯದ ಪಾಠ ಹೇಳಿಕೊಟ್ಟ ಯುವತಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಲ್ಲಿ ಒಂದು ದಿನ ಕಳೆಯಬೇಕೆಂದರೆ ಕೈಯಲ್ಲಿ ಸಾವಿರಾರು ರೂಪಾಯಿ ಬೇಕು ಎನ್ನುವ ಮಾತಿದೆ. ಆದರೆ, ಪ್ರಿಯಾಂಕಾ ಎಂಬ ಬಂಗಾಳಿ ಯುವತಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಅವರು ಕೇವಲ ₹500ರ ಬಜೆಟ್‌ನಲ್ಲಿ ಇಡೀ ದಿನವನ್ನು ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ಮುಗಿಸಿದ್ದಲ್ಲದೆ, ದಿನದ ಅಂತ್ಯಕ್ಕೆ ₹200 ಉಳಿತಾಯವನ್ನೂ ಮಾಡಿ ತೋರಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ನೆಟ್ಟಿಗರು ದಂಗಾಗಿದ್ದಾರೆ.
ಪ್ರಿಯಾಂಕಾ ತಮ್ಮ ದಿನವನ್ನು ಅತ್ಯಂತ ಸರಳವಾಗಿ ಆರಂಭಿಸಿದರು. ಬೆಳಗ್ಗಿನ ಉಪಾಹಾರಕ್ಕಾಗಿ ಅವರು ಇಡ್ಲಿಯನ್ನು ಆರಿಸಿಕೊಂಡರು. "ಬೆಳಗ್ಗೆ ಇಡ್ಲಿ ತಿಂದಾಗ ಜೀವನ ಸುಸೂತ್ರವಾಗಿ ಸಾಗುತ್ತಿದೆ ಎನಿಸಿತು" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು ಪ್ರಯಾಣದ ವಿಷಯಕ್ಕೆ ಬಂದರೆ, ಬೆಂಗಳೂರಿನಲ್ಲಿ ಕ್ಯಾಬ್ ಅಥವಾ ಆಟೋ ದರಗಳು ಗಗನಕ್ಕೇರಿರುವುದರಿಂದ, ಅವರು ಬಜೆಟ್‌ಗೆ ಅನುಗುಣವಾಗಿ ನಮ್ಮ ಮೆಟ್ರೋ ಅನ್ನು ಬಳಸಿಕೊಂಡರು. ಮಧ್ಯದಲ್ಲಿ ದಣಿವು ನೀಗಿಸಿಕೊಳ್ಳಲು ಒಂದು ಟೀ ಬ್ರೇಕ್ ಕೂಡ ಪಡೆದರು.

ದುಬಾರಿ ಮೆನು ಮತ್ತು ಮಧ್ಯಾಹ್ನದ ಊಟ
ಪ್ರಿಯಾಂಕಾ ಅವರಿಗೆ ಇಡೀ ದಿನದಲ್ಲಿ ದೊಡ್ಡ ಸವಾಲಾಗಿದ್ದು ಮಧ್ಯಾಹ್ನದ ಊಟ. ನಗರದ ಹೋಟೆಲ್‌ಗಳ ಮೆನು ಕಾರ್ಡ್ ನೋಡಿದಾಗ ಬೆಲೆ ಕಂಡು ಅವರಿಗೆ ಆಘಾತವಾಗಿತ್ತು. ಆದರೂ ದೃತಿಗೆಡದ ಅವರು, ಸರಿಯಾದ ಹೋಟೆಲ್ ಹುಡುಕಿ ಕೇವಲ ₹120ರೊಳಗೆ ಮಧ್ಯಾಹ್ನದ ಊಟ ಮುಗಿಸುವಲ್ಲಿ ಯಶಸ್ವಿಯಾದರು.
ದಿನ ಉರುಳುತ್ತಿದ್ದಂತೆ ಪ್ರಿಯಾಂಕಾ ಮೊಂಡಲ್ ಅವರು ತಮ್ಮ ಬಜೆಟ್ ಮೇಲೆ ಹೆಚ್ಚಿನ ನಿಗಾ ಇರಿಸಿದರು. ಸಂಜೆಯ ವೇಳೆ ಹಸಿವಾದಾಗ ಅವರು ದೊಡ್ಡ ಹೋಟೆಲ್‌ಗೆ ಹೋಗುವ ಬದಲಾಗಿ ರಸ್ತೆ ಬದಿಯ ಗಾಡಿಯಲ್ಲಿ ಒಂದು ವಡಾ ಪಾವ್ ಮತ್ತು ಮತ್ತೊಂದು ಕಪ್ ಚಹಾ ಸೇವಿಸಿ ಸುಮ್ಮನಾದರು. "ಸಂಜೆಯ ಹೊತ್ತಿಗೆ ನನ್ನ ಬಜೆಟ್ ನಾನು ಮನೆಗೆ ಮರಳುವ ಸಮಯವಾಗಿದೆ ಎಂದು ಸೂಚಿಸುತ್ತಿತ್ತು" ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
200 ರೂಪಾಯಿ ಉಳಿತಾಯ ಹೇಗೆ?
ಅಚ್ಚರಿಯ ವಿಷಯವೆಂದರೆ, ಇಡೀ ದಿನ ಬೆಂಗಳೂರಿನಲ್ಲಿ ಸುತ್ತಾಡಿ, ಊಟ-ತಿಂಡಿ ಮುಗಿಸಿದ ನಂತರವೂ ಅವರ ಕೈಯಲ್ಲಿ ಹಣ ಉಳಿದಿತ್ತು. "ದಿನದ ಕೊನೆಯಲ್ಲಿ ನನ್ನ ಬಳಿ ₹200 ಉಳಿತಾಯವಾಗಿತ್ತು. ಈ ಯಶಸ್ಸಿನ ಖುಷಿಯಲ್ಲಿ ನಾನು ಸಣ್ಣದೊಂದು ಡ್ಯಾನ್ಸ್ ಕೂಡ ಮಾಡಿದೆ" ಎಂದು ಅವರು ತಮ್ಮ ವಿಡಿಯೋದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ಇವರ ಈ ಸ್ಮಾರ್ಟ್ ಪ್ಲಾನಿಂಗ್ ಈಗ ಮಧ್ಯಮ ವರ್ಗದ ಜನರಿಗೆ ಮತ್ತು ನಗರಕ್ಕೆ ಹೊಸದಾಗಿ ಬಂದವರಿಗೆ ಒಂದು ಕೈಪಿಡಿಯಂತಾಗಿದೆ.
"ಬೆಂಗಳೂರಿನಂತಹ ನಗರದಲ್ಲಿ ₹500ರಲ್ಲಿ ಬದುಕುವುದು ಸಾಧ್ಯವೇ ಎಂದು ತಿಳಿಯಲು ನಾನು ಈ ಪ್ರಯತ್ನ ಮಾಡಿದೆ. ದಿನದ ಕೊನೆಯಲ್ಲಿ ನನ್ನ ಬಳಿ ₹200 ಉಳಿದಿತ್ತು, ಅಂದರೆ ನಾನು ಕೇವಲ ₹300ರಲ್ಲಿ ಒಂದು ದಿನ ಕಳೆದೆ" ಎಂದು ಅವರು ಅಚ್ಚರಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ಸ್ಮಾರ್ಟ್ ಬಜೆಟ್ ನಿರ್ವಹಣೆ ಕಂಡು ನೆಟ್ಟಿಗರು ಫಿದಾ ಆಗಿದ್ದು, "ಬೆಂಗಳೂರಿನಲ್ಲಿ ಬದುಕಲು ಹಣಕ್ಕಿಂತ ಹೆಚ್ಚಾಗಿ ಪ್ಲಾನಿಂಗ್ ಮುಖ್ಯ" ಎಂದು ಕಮೆಂಟ್ ಮಾಡುತ್ತಿದ್ದಾರೆ.
ದುಬಾರಿ ನಗರಗಳಲ್ಲೂ ಮಿತವ್ಯಯದಿಂದ ಬದುಕಬಹುದು ಎಂಬುದಕ್ಕೆ ಈ ಯುವತಿಯ ಪ್ರಯತ್ನ ಒಂದು ಉತ್ತಮ ಉದಾಹರಣೆಯಾಗಿದೆ. ಐಷಾರಾಮಿ ಹೋಟೆಲ್‌ಗಳು ಮತ್ತು ಕ್ಯಾಬ್‌ಗಳ ಬದಲಾಗಿ ಸ್ಥಳೀಯ ಆಹಾರ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ ಹಣ ಉಳಿಸಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.












Click it and Unblock the Notifications