ಕರ್ನಾಟಕ 2nd PUC Result 2023 Live: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ಘೋಷಣೆ!
ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದರೆ, ಮತ್ತೊಂದ್ಕಡೆ ವಿದ್ಯಾರ್ಥಿಗಳಿಗೆ ರಿಸಲ್ಟ್ ಟೆನ್ಷನ್ ಶುರುವಾಗಿದೆ. ಇಷ್ಟೆಲ್ಲದರ ಮಧ್ಯೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ಆದೇಶ ಹೊರಬಿದ್ದಿದೆ. ಏಪ್ರಿಲ್ 21ರ ಶುಕ್ರವಾರ ಬೆಳಗ್ಗೆ ದ್ವಿತೀಯ ಪಿಯು ಫಲಿತಾಂಶ (puc result) ಪ್ರಕಟವಾಗಲಿದೆ. ಮಾರ್ಚ್‌ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ (puc exam) ಬರೆದಿದ್ದರು.
2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ (second PUC examination) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಫಲಿತಾಂಶ ಹೊರಬೀಳುತ್ತೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಆ ಸುದ್ದಿ ಈಗ ನಿಜವಾಗಿದ್ದು, ನಾಳೆಯೇ ಪಿಯುಸಿ ರಿಸಲ್ಟ್ ಸಿಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ದ್ವಿತೀಯ ಪಿಯುಸಿ ಫಲಿತಾಂಶ www.karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗುತ್ತದೆ.

ನಾಳೆ ಬೆಳಗ್ಗೆ 10 ಗಂಟೆಗೆ ಪರೀಕ್ಷಾ ಮಂಡಳಿ ಸುದ್ದಿಗೋಷ್ಠಿ ನಡೆಸಲಿದ್ದು, ನಂತರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಮೂಲಕ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಗಳನ್ನು ನೀಡಲಾಗಿತ್ತು. ರಸಾಯನಶಾಸ್ತ್ರ ಪರೀಕ್ಷೆ ಸಿಬಿಎಸ್‌ಸಿ, ಐಸಿಎಸ್‌ಸಿ ಮಾದರಿಯಲ್ಲಿ ಇತ್ತು ಎಂಬ ದೂರುಗಳು ಕೇಳಿಬಂದಿತ್ತು. ಈ ಕುರಿತು ಕೆಲವರು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಗೆ ದೂರು ಸಲ್ಲಿಸಿದ್ದರು.
ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು?
ಮತ್ತೊಂದ್ಕಡೆ ರಾಜ್ಯದ 5,716 ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಚ್ 9 ರಿಂದ ಮಾ.29ರ ತನಕ 1,109 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ನಡೆಸಲಾಗಿತ್ತು. ರಾಜ್ಯದ 3,63,698 ವಿದ್ಯಾರ್ಥಿಗಳು ಮತ್ತು 3,62,497 ವಿದ್ಯಾರ್ಥಿನಿಯರು ಸೇರಿ ಒಟ್ಟು 7,26,195 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರಾಗಿದ್ದು, 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳು. ಕಲಾ ವಿಭಾಗದಿಂದ 2,34,815, ವಾಣಿಜ್ಯ ವಿಭಾಗದಿಂದ 2,47,260, ವಿಜ್ಞಾನ ವಿಭಾಗದಿಂದ 2,44,120 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು.
ಕಟ್ಟುನಿಟ್ಟಾಗಿ ನಡೆದಿತ್ತು ಪರೀಕ್ಷೆ
ದ್ವಿತೀಯ ಪಿಯುಸಿ ಪರೀಕ್ಷೆಯನ್ನ ಈ ಬಾರಿ ಎಂದಿಗಿಂತ ಕಟ್ಟುನಿಟ್ಟಾಗಿ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣ ನಿಷೇಧಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ಬಳಿ, ಸಿಸಿ ಕ್ಯಾಮೆರಾ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ ಭಾರಿ ಭದ್ರತೆ ಕಲ್ಪಿಸಲಾಗಿತ್ತು.

ಮತ್ತೊಂದು ಕಡೆ ಪರೀಕ್ಷಾ ಕೇಂದ್ರಗಳಲ್ಲಿ 1,109 ಸಹ ಮುಖ್ಯಶಿಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2373 ವಿಶೇಷ ಜಾಗೃತ ದಳದ ಸಿಬ್ಬಂದಿಯನ್ನು ಪರೀಕ್ಷೆ ನಿರ್ವಹಣೆಗೆ ನಿಯೋಜನೆ ಮಾಡಲಾಗಿತ್ತು. ಇದರ ನಡುವೆ ದೇಶದ ಗಮನ ಸೆಳೆದಿದ್ದ ಹಿಜಾಬ್ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಲಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದನ್ನು ನಿರ್ಬಂಧಿಸಲಾಗಿತ್ತು. ಬೆಳಗಾವಿ ಹಾಗೂ ಯಾದಗಿರಿಯಲ್ಲಿ ಅವ್ಯವಹಾರ ಪ್ರಕರಣ ವರದಿಯಾದ ಹಿನ್ನೆಲೆ ಮೊದಲ ದಿನವೇ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದರು ಅಧಿಕಾರಿಗಳು.
ಒಟ್ಟಾರೆ ಹೇಳುವುದಾದರೆ ದ್ವಿತೀಯ ಪಿಯು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮತ್ತೊಂದು ಕಡೆ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದ್ವಿತೀಯ ಪಿಯುಸಿ ಪರೀಕ್ಷೆ ಮಹತ್ವದ ಘಟ್ಟವಾಗಿದ್ದು. ಇಡೀ ದೇಶದಲ್ಲಿ ಕರ್ನಾಟಕದ ಪಿಯು ಪರೀಕ್ಷೆಗೆ ಮಹತ್ವದ ಸ್ಥಾನಮಾನ ಇದ್ದು, ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ.












Click it and Unblock the Notifications