Breaking: Bengaluru rain: ಎರಡನೇ ಸಾವು ವರದಿ, ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆ
ಬೆಂಗಳೂರು, ಮೇ 22: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಮೇ 22) ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಕಾರಿನಲ್ಲಿ ಒಬ್ಬರು ಮೃತಪಟ್ಟರೆ ಮತ್ತೊಬ್ಬರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಶವವಾಗಿ ಪತ್ತೆಯಾದ ಧಾರುಣ ಘಟನೆ ನಡೆದಿದೆ.
ನಗರದಲ್ಲಿ ನೆನ್ನೆ ಮಧ್ಯಾಹ್ನ 3ಗಂಟೆ ಹೊತ್ತಿಗೆ ಜೋರು ಗಾಳಿ ಸಹಿತ ಕೆಲ ಕಾಲ ಆರ್ಭಟಿಸಿದ ಮಳೆಯಿಂದಾಗಿ ರಸ್ತೆ, ಅಂಡರ್‌ಪಾಸ್ ಸೇರಿದಂತೆ ಹಲವೆಡೆ ನೀರು ಉಕ್ಕಿ ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿತು. ಈ ವೇಳೆ ಎರಡು ಪ್ರತ್ಯೇಕ ಕಡೆಗಳಲ್ಲಿ ಪ್ರಾಣ ಹಾನಿ ಸಂಭವಿಸಿದೆ.

ಬ್ಯಾಟರಾಯನಪುರದಲ್ಲಿ ಮಳೆ ಬಂದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರು. ಈ ಕುರಿತು ನಿರಂತರ ಶೋಧ ಕಾರ್ಯ ನಡೆಸಿದ ಬಳಿಕ ಇಂದು ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಆತನನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಲೋಕೇಶ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಗಿದೆ.
ಲೋಕೇಶ್ ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಮುಂಗಾರು ಮಳೆ ಆರಂಭಕ್ಕೂ ಇನ್ನು ವಾರಗಳು ಬಾಕಿ ಇವೆ. ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಬೆಂಗಳೂರಿನಲ್ಲಿ ಒಂದೇ ದಿನ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವು
ಭಾನುವಾರ ಮಧ್ಯಾಹ್ನ ಅರ್ಧ ಗಂಟೆ ಸುರಿದ ಮಳೆಗೆ ನಗರದ ಕೆ.ಆರ್. ವೃತ್ತದಲ್ಲಿ ರಸ್ತೆ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿತು. ಆ ಕಾರಿನಲ್ಲಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಯುವತಿ ಬೆಂಳೂರಿನಲ್ಲಿ ಪ್ರತಿಷ್ಠಿತ ಇನ್ಫೋಸಿಸ್ ಉದ್ಯೋಗಿಯಾಗಿದ್ದರು.

ಅಂಡರ್‌ಪಾಸ್‌ನಲ್ಲಿ ಕಾರು ತೆಳುತ್ತಿದ್ದಂತೆ ಮುಂದೆ ಹೋಗಲಾಗದೇ ನಿಂತಿದೆ. ಕೂಡಲೇ ಕಾರಿನೊಳಕ್ಕೆ ನೀರು ಬರಲಾರಂಭಿಸಿದೆ. ದುರದೃಷ್ಟವಶಾತ್ ಕಾರಿನ ಬಾಲಗಿಲಾಗಲೇ, ಕಿಟಕಿಯಾಗಲಿ ತೆರೆಯಲು ಸಾಧ್ಯವಾಗಿಲ್ಲ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಕಾರಿ ಮುಂದಿನ ಗ್ಲಾಸು ಒಡೆದು ಒಬ್ಬೊಬ್ಬರನ್ನಾಗಿ ಕಾಪಾಡಿದ್ದಾರೆ. ಅಷ್ಟರಲ್ಲಾಗಲೇ ಯುವತಿ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಮೃತದೇಹವಿದ್ದ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಇಷ್ಟೇ ಅಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮಾಲೀಕರು ನೀರು ಹೊರ ಹಾಕಲು ಪರದಾಡಿದ್ದಾರೆ. ನಗರದೆಲ್ಲಡೆ ಮರದ ಕೊಂಬೆಗಳು, ಮರಗಳು ಧರೆಗುರುಳಿ ಸಂಚಾರ ಅಸ್ತವೆಸ್ತವಾಗಿದೆ. ಇಂದು ಸಹ ಜೋರು ಮಳೆ ಬರಲಿದೆ.












Click it and Unblock the Notifications