Bengaluru Tragedy: ರಸ್ತೆಗುಂಡಿಗೆ 22 ವರ್ಷದ ವಿದ್ಯಾರ್ಥಿನಿ ಬಲಿ, ಟಿಪ್ಪಿರ್ ಹರಿದು ಸಾವು
ಬೆಂಗಳೂರು, ಸೆಪ್ಟಂಬರ್ 29: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಒಂದು ಕಡೆ ರಸ್ತೆಗುಂಡಿ ಮುಚ್ಚಲಾಗುತ್ತಿದೆ ಎಂದು ಹೇಳುತ್ತಿದೆ. ಈ ಕಾರ್ಯ ಪ್ರಗತಿಯ ಮಧ್ಯದಲ್ಲೇ ರಸ್ತೆಗುಂಡಿಯಿಂದಾಗಿ ಕಾಲೇಜಿಗೆ ತೆರಳುತ್ತಿದ್ದ 22 ವರ್ಷದ ವಿದ್ಯಾರ್ಥಿನಿ ಬಲಿಯಾಗಿದ್ದಾರೆ. ಇದಕ್ಕೆಲ್ಲ ರಸ್ತೆಗುಂಡಿಯೇ ಕಾರಣ. ಸರ್ಕಾರದ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಧನುಶ್ರೀ (22) ರಸ್ತೆಗುಂಡಿ ತಪ್ಪಿಸಲು ಹೋಗಿ ಬಲಿಯಾದ ಬಿಕಾಂ ವಿದ್ಯಾರ್ಥಿನಿ. ಎಂದಿನಂತೆ ತನ್ನ ಖಾಸಗಿ ಕಾಲೇಜಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಧನುಶ್ರೀ ರಸ್ತೆಗುಂಡಿ ತಪ್ಪಿಸಲು ಮುಂದಾಗಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ ಮತ್ತು ಸ್ಕೂಟರ್ ಮಧ್ಯ ಡಿಕ್ಕಿ ಸಂಭವಿಸಿದೆ. ಆಗ ಧನುಶ್ರೀ ಆಯತಪ್ಪಿ ಎಡಭಾಗಕ್ಕೆ ಬಿದ್ದಿದ್ದಾಳೆ. ಟಿಪ್ಪರ್ ಲಾರಿ ಆಕೆಯ ತಲೆಯ ಮೇಲೆ ಹರಿದ ಘಟನೆ ಬೂದಿಗೆರೆ ಕ್ರಾಸ್ ಬಳಿ ನಡೆದಿದೆ. ಸ್ಥಳದಲ್ಲೇ ಧನುಶ್ರೀ ಮೃತಪಟ್ಟಿದ್ದು, ಸುದ್ದಿ ತಿಳಿಯುತ್ತಿದ್ದ ಪೋಷಕರು ಕಣ್ಣೀರಾಗಿದ್ದಾರೆ. ಅವರಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.

ಗುಂಡಿ ಗಂಡಾಂತರದಿಂದ ಬೆಂಗಳೂರು ಮತ್ತೊಂದು ಸಾವಿಗೆ ಸಾಕ್ಷಿಯಾಗಿದೆ. ಬೂದಿಗೆರೆ ಕ್ರಾಸ್‌ನ ಈ ರಸ್ತೆಯಲ್ಲಿ ನಿತ್ಯ ಸಾರ್ವಜನಿಕರು ಓಡಾಡುವ. ರಸ್ತೆಗುಂಡಿಗಳನ್ನು ಸರ್ಕಾರ ಮುಚ್ಚುವ ಕೆಲಸ ಮಾಡುತ್ತಿರುವುದಾಗಿ ಹೇಳಿದೆ. ಆದರೆ ಅದಕ್ಕೆ ಎಷ್ಟು ವೇಗ ನೀಡಲಾಗಿದೆ. ಇದರಲ್ಲಿ ಎಷ್ಟು ನಿರ್ಲಕ್ಷ್ಯ ತಾಳಲಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಓದಿ, ಮುಂದೆ ಭವಿಷ್ಯದಲ್ಲಿ ಬಾಳಿ ಬದುಕಬೇಕಾಗಿದ್ದ ವಿದ್ಯಾರ್ಥಿನಿ ಅಸುನೀಗಿದ್ದಾಳೆ.
ಬೂದಿಗೆರೆ ಕ್ರಾಸ್ ಬಳಿ ಧೂಳಿನಿಂದ ರಸ್ತೆ ಆವೃತವಾಗಿದೆ. ರಸ್ತೆಗಳು ಗುಂಡಿ ಬಿದ್ದಿವೆ. ಇಲ್ಲಿ ಜಲ್ಲಿಕಲ್ಲು ಮೇಲೆ ಬಂದಿವೆ. ನಿತ್ಯ ಓಡಾಟಲು ಪರದಾಡಬೇಕಾಗಿದೆ ಎಂದು ಸ್ಥಳಿಯರು ಹೇಳಿದ್ದಾರೆ. ಈ ಭಾಗದಲ್ಲಿ ಟಿಪ್ಪರ್ ಲಾರಿ ಹಾವಳಿ ಜಾಸ್ತಿ ಆಗಿದೆ. ರಸ್ತೆ ಗುಂಡಿಯನ್ನು ಕಳಪೆ ಮಟ್ಟದಲ್ಲಿ ಮುಚ್ಚಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟಿಪ್ಪರ್ ಚಾಲಕ ಹೇಳಿದ್ದೇನು?
ಈ ಸಂಬಂಧ ಪ್ರಕರಣ ದಾಖಲಾಗಿದೆ. ಗುಂಡಿ ತಪ್ಪಿಸಲು ಮುಂದಾದಾಗ ಟಿಪ್ಪರ್ ಸ್ಟೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಟಿಪ್ಪರ್ ಚಾಲಕ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಮಾತ್ರವಲ್ಲದೇ ಬೆಂಗಳೂರು ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿಯೇ ಇನ್ನೂ ಸಾಕಷ್ಟು ರಸ್ತೆಗುಂಡಿಗಳು ಜನರ ಜೀವ ಬಲಿ ಪಡೆಯಲು ಕಾದು ಕೂತಿರುವಂತೆ ಭಾಸವಾಗುತ್ತೆ. ಈ ಬಗ್ಗೆ ಸರ್ಕಾರ ಗಮನಹರಿಸುವಂತೆ ಜನರು ಆಗ್ರಹಿಸಿದ್ದಾರೆ.
ರಸ್ತೆಗುಂಡಿ ದುರಸ್ತಿಯಲ್ಲಿ ಗುಣಮಟ್ಟ ಕಾಯಿರಿ
ಬೆಂಗಳೂರು ರಸ್ತೆಗುಂಡಿ ಬಗ್ಗೆ ತೀವ್ರ ಅಸಮಾಧಾನ, ಕಳವಳ ವ್ಯಕ್ತವಾಗುತ್ತಿದ್ದಂತೆ ಕಳೆದ ಎರಡು ವಾರಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಬೇಕು. ಜೊತೆಗೆ ಸೂಕ್ತ ರೀತಿಯಲ್ಲಿ, ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳದಂತೆ ಗುಣಮಟ್ಟ ಕಾಯ್ದುಕೊಂಡು ರಸ್ತೆಗುಂಡಿ ದುರಸ್ತಿ ಮಾಡುವಂತೆ ಜನರು ಆಗ್ರಹಿಸುತ್ತಿದ್ದಾರೆ.












Click it and Unblock the Notifications