ಬೆಂಗಳೂರಿನಲ್ಲಿ ಬಲೂನ್‌ಗಳಿಗೆ ತುಂಬಿಸುವ ಗ್ಯಾಸ್ ಸ್ಫೋಟ; ಸಂಭ್ರಮದ ಮನೆಯಲ್ಲಿ ಸೂತಕ!
ಬೆಂಗಳೂರು, ಜುಲೈ 04: ಸಿಲಿಕಾನ್ ಸಿಟಿಯಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ದಿಢೀರ್ ಸೂತಕದ ಛಾಯೆ ಆವರಿಸಿದೆ. ಬರ್ತ್ ಡೇ ಆಚರಿಸುವುದಕ್ಕಾಗಿ ಬಲೂನ್ ಗಳಿಗೆ ತುಂಬಿಸುತ್ತಿದ್ದ ಗ್ಯಾಸ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ.
ಬೆಂಗಳೂರು ಪರಪ್ಪನ ಅಗ್ರಹಾರದ ನಿವಾಸಿ 19 ವರ್ಷದ ದಿನೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಹುಟ್ಟುಹಬ್ಬ ಹಾಗೂ ವಿವಿಧ ಸಭೆ ಸಮಾರಂಭಗಳಿಗೆ ಗ್ಯಾಸ್ ತುಂಬಿಸಿದ ಬಲೂನ್ ಮಾರಾಟ ಮಾಡುತ್ತಿದ್ದನು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ದಿನೇಶ್ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವ ಉದ್ಯೋಗವನ್ನು ಮಾಡಿಕೊಂಡಿದ್ದರು. ಆನ್ ಲೈನ್ ಮೂಲಕ ಆರ್ಡರ್ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬಕ್ಕೆ ಗ್ಯಾಸ್ ತುಂಬಿಸಿದ ಬಲೂನ್ ನೀಡುವುದಕ್ಕೆ ದಿನೇಶ್ ಒಪ್ಪಂದ ಮಾಡಿಕೊಂಡಿದ್ದನು. ಭಾನುವಾರ ತನ್ನ ಸಹಚರ ಮಹದೇಶ್ ಎಂಬುವವರ ಜೊತೆ ದಿನೇಶ್ ಅಪಾರ್ಟ್ ಮೆಂಟ್ ತಲುಪಿದ್ದರು. ತಾವು ಬೈಕ್ ನಿಲ್ಲಿಸಿದ ಸ್ಥಳದಲ್ಲೇ ಮಾಹದೇಶ್ ಹಾಗೂ ದಿನೇಶ್ ಇಬ್ಬರೂ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಲ್ಲಿ ನಿರತರಾಗಿದ್ದರು. ಈ ಮಧ್ಯೆ ಮಹದೇಶ್ ನೀರು ತರುವುದಕ್ಕಾಗಿ ಅಪಾರ್ಟ್ ಮೆಂಟ್ ಒಳಗೆ ಹೋಗಿದ್ದ ಸಂದರ್ಭದಲ್ಲಿ ಗ್ಯಾಸ್ ಸ್ಫೋಟಗೊಂಡು ದಿನೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಹುಟ್ಟುಹಬ್ಬಕ್ಕಾಗಿ 200 ಬಲೂನ್ ಆರ್ಡರ್:
ಅಪಾರ್ಟ್ ಮೆಂಟ್ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಬರ್ತ್ ಡೇ ಪಾರ್ಟಿಗಾಗಿ 200 ಬಲೂನ್ ನೀಡುವಂತೆ ಆರ್ಡರ್ ಕೊಟ್ಟಿದ್ದರು. ಈ ಪೈಕಿ 100 ಬಲೂನ್ ಅನ್ನು ಮೊದಲೇ ಸರಬರಾಜು ಮಾಡಲಾಗಿತ್ತು. ಬಾಕಿ ಉಳಿದ 100 ಬಲೂನ್ ನೀಡುವುದಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.












Click it and Unblock the Notifications