Bengaluru KIA: ಬುದ್ಧಿಮಾಂದ್ಯ ಬಾಲಕನಿಗೆ ವಿಮಾನ ಏರಲು ಬಿಡದ ಶ್ರೀಲಂಕಾ ಏರ್‌ಲೈನ್ಸ್
ಬೆಂಗಳೂರು, ಮೇ 31: ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬುದ್ಧಿಮಾಂದ್ಯ ಬಾಲಕನೊಬ್ಬನನ್ನು ವಿಮಾಣ ಹತ್ತದಂತೆ ತಡೆದ ಘಟನೆ ನಡೆದಿದೆ. ಪೈಲಟ್‌ಗಳು ಮತ್ತು ಸಹ ಪ್ರಯಾಣಿಕರಿಗೆ ಬೆದರಿಕೆ, ತೊಂದರೆ ನೀಡಬಹುದು ಎಂದು ಆರೋಪಿಸಿದ ಶ್ರೀಲಂಕಾ ಏರ್‌ಲೈನ್ಸ್ ಸಿಬ್ಬಂದಿ ಆರಂಭದಲ್ಲಿ ಬಾಲಕನಿಗೆ ವಿಮಾನ ಏರಲು ಅವಕಾಶ ನೀಡಲಿಲ್ಲ.
ತನ್ನ ಮಗ 15 ವರ್ಷದ ಬುದ್ಧಿಮಾಂಧ್ಯನನ್ನು ವಿಮಾನಕ್ಕೆ ಏರಲು ಬಿಡದ ಏರ್‌ಲೈನ್ಸ್ ಸಿಬ್ಬಂದಿ ವಿರುದ್ಧ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತತವಾಗಿ ಎರಡು ಗಂಟೆಗಳ ಕಾಲ ಈ ಕುರಿತು ತಾಯಿ ಮತ್ತು ಸಿಬ್ಬಂದಿ ಜೊತೆಗೆ ವಾಗ್ವಾದ ನಡೆದಿದೆ. ಬಳಿಕ ಬಾಲಕನಿಗೆ ತಾಯಿಯೊಂದಿಗೆ ವಿಮಾನದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಇಷ್ಟಕ್ಕೆ ಸುಮ್ಮನಾಗದ ಬುದ್ಧಿಮಾಂದ್ಯ ಬಾಲಕನ ತಾಯಿ ಏರ್‌ಲೈನ್ಸ್ ಸಿಬ್ಬಂದಿ ವಿರುದ್ಧ ಅಜಾಗರೂಕತೆ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಮಾನಯಾನ ಸಂಸ್ಥೆ ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೂರು ನೀಡಿದ್ದಾರೆ.
ಬಾಬುಸ್‌ಪಾಳ್ಯ ದಂಪತಿಗಳ ಇಬ್ಬರು ಮಕ್ಕಳಿದ್ದು, ಅವರೆಲ್ಲ ರಜಾದಿನ ಹಿನ್ನೆಲೆ ಮಾಲ್ಡೀವ್ಸ್‌ಗೆ ತೆರಳಲು ಶ್ರೀಲಂಕಾ ಏರ್‌ಲೈನ್ಸ್ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಈ ಸಂಬಂಧ ಅವರು ಬೆಂಗಳೂರು ಏರ್‌ಫೋರ್ಟ್‌ಗೆ ಆಗಮಿಸಿದ್ದರು. ಮೇ 17 ರಂದು ಬೆಳಗ್ಗೆ 12.30 ರ ಸುಮಾರಿಗೆ ತಾಯಿ, ತಂದೆ ಮತ್ತು ಮಕ್ಕಳು ವಿಮಾನಕ್ಕಾಗಿ ತಮ್ಮ ಲಗೇಜ್ ಚೆಕ್-ಇನ್ ಮಾಡಲು ಕಾಯುತ್ತಿರುವ ವೇಳೆ ಅವರನ್ನು ತಡೆದ ಘಟನೆ ನಡೆದಿದೆ.
ಏರ್‌ಲೈನ್ಸ್ ಸಿಬ್ಬಂದಿ ಆರೋಪವೇನು?
ಶ್ರೀಲಂಕಾ ಏರ್‌ಲೈನ್ಸ್‌ನ ಸಿಬ್ಬಂದಿ ಪೈಕಿ ಇಬ್ಬರು ಬಂದು 15 ವರ್ಷದ ಕಿರಿಯ ಮಗನ ಕುರಿತು ಪ್ರಶ್ನಿಸಿದರು. ಅವರು ಸ್ವಲೀನತೆ (ಬುದ್ಧಿಮಾಂದ್ಯ) ಹೊಂದಿದ್ದು, ಕೇವಲ ಮೊಬೈಲ್ ಅಪ್ಲಿಕೇಶನ್ ಬಳಸಿ ಸಂವಹನ ನಡೆಸುತ್ತಾರೆ. ಇದರಿಂದ ತೊಂದರೆ, ಬೆದರಿಕೆ ಹಾಕುವ ಸಂಭವವ ಇದೆ ಎಂದು ಸಿಬ್ಬಂದಿ ಹೇಳಲು ಆರಂಭಿಸಿದರು.

ಈ ಎಲ್ಲ ಕಾರಣಗಳನ್ನು ನೀಡಿ ಮಗನನ್ನು ಸಹ ಪ್ರಯಾಣಿಕರ ಜೊತೆ ಹತ್ತಲು ನಿರಾಕರಿಸಿದರು. ಇದೆಲ್ಲ ನೋಡಿದ ಮತ್ತೊಬ್ಬ ಬಾಲಕ ಹೆದರಿ ನಿಂತಿದ್ದ. ಇದು ಸಿಬ್ಬಂದಿಯ ಅಜಾಗರೂಕತೆ ತೋರಿಸುತ್ತದೆ. ಪ್ರಯಾಣಿಕರೊಂದಿಗೆ ನಡೆದುಕೊಳ್ಳುವ ರೀತಿಯಲ್ಲ ಎಂದು ತಾಯಿ ವಿವರಿಸಿದ್ದಾರೆ.
ಘಟನೆಯನ್ನು ಹತ್ತಿರದಿಂದಲೇ ಗಮನಿಸಿದ ಬೆಂಗಳೂರು ಏರ್‌ಫೋರ್ಟ್ ಅಧಿಕಾರಿಗಳು ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಫೋರ್ಟ್ ಲಿಮಿಟೆಡ್ (BIAL) ಅಧಿಕಾರಿಗಳು ಮಧ್ಯಪ್ರವೇಶಿಸಿದರು. ವಿಶೇಷ ಮಕ್ಕಳ ಪ್ರಯಾಣದ ಕುರಿತು ಎರಡು ದಿನಗಳ ಮುಂಚಿತವಾಗಿ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಅವರು ಏರ್‌ಲೈನ್ ಸಿಬ್ಬಂದಿಗೆ ಅಧಿಕಾರಿಗಳು ತಿಳಿಸಿದರು.












Click it and Unblock the Notifications