Land Acquisition: ಬೆಂಗಳೂರು ಸಮೀಪದಲ್ಲೇ 1,000 ಎಕರೆ ಭೂಮಿ ಸ್ವಾಧೀನ: ಯಾರಿಗೆಲ್ಲ ಜಾಕ್‌ಪಾಟ್?
ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಕೂಡ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಇದೀಗ ಬೆಂಗಳೂರಿನ ಸಮೀಪದಲ್ಲೇ ಇರುವ ಪ್ರದೇಶದಲ್ಲಿ ಬರೋಬ್ಬರಿ 1,000 ಎಕರೆಗೂ ಹೆಚ್ಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ಯಾರಿಗೆಲ್ಲ ಅನುಕೂಲವಾಗಲಿದೆ? ಯಾವ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ? ಯಾವುದು ಈ ಯೋಜನೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ ನೀಡಿದ್ದಾರೆ. ಸುಮಾರು ಸಾವಿರ ಎಕರೆ ಪ್ರದೇಶದ ಈ ಯೋಜನೆಯ ಪ್ರಾಥಮಿಕ ಹಂತದ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅದನ್ನು ಚುರುಕುಗೊಳಿಸಲಾಗುವುದು. ಹಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳು ಜಮೀನಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಶೀಘ್ರದಲ್ಲೇ ಈ ವಲಯವನ್ನು ಪರಿಪೂರ್ಣವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಹೊಂದಿಕೊಂಡಿರುವ ಹೊಸಕೋಟೆ ತಾಲ್ಲೂಕಿನ ನಂದಗುಡಿ ಕೈಗಾರಿಕಾ ಪ್ರದೇಶದಲ್ಲಿ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 1,000 ಎಕರೆಯಷ್ಟು ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಶುರು ಮಾಡಿದೆ. ಈ ಸಂಬಂಧ ಹೊಸಕೋಟೆ ಶಾಸಕರು ಹಾಗೂ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರೂ ಆದ ಶರತ್ ಬಚ್ಚೇಗೌಡ ಅವರು ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿ, ನಂದಗುಡಿ ಕೈಗಾರಿಕಾ ಪ್ರದೇಶ ಸಂಬಂಧ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಮೆಟ್ರೋ ಸಂಪರ್ಕ ಕೂಡ ಸಿಗಲಿದ್ದು, ಈ ಭಾಗದ ಪ್ರದೇಶಗಳ ಸ್ವರೂಪ ಬದಲಾಗಲಿದೆ. ಅಲ್ಲದೆ ಭೂಮಿ ಬೆಲೆ ಕೂಡ ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಿಆರ್‌ಆರ್ ಬಗ್ಗೆ ತಪ್ಪು ಮಾಹಿತಿ
ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಪೆರಿಫೆರಲ್ ರಿಂಗ್ ರೋಡ್ ಯೋಜನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈ ಯೋಜನೆಗೆ 20,000 ಕುಟುಂಬಗಳು ಭೂಮಿ ಕಳೆದುಕೊಳ್ಳುವುದಾಗಿ ವದಂತಿ ಹಬ್ಬಿದೆ. ಆದರೆ 2,418 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡುತ್ತಿದ್ದು, ಸುಮಾರು 5,000 ಕುಟುಂಬಗಳು ಮಾತ್ರ ಪೂರ್ಣ ಅಥವಾ ಭಾಗಶಃ ಭೂಮಿಯನ್ನು ಕಳೆದುಕೊಳ್ಳುತ್ತಿವೆ ಎಂದು ಸ್ಪಷ್ಟನೆ ನೀಡಿದೆ.
ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಎಂದಿದ್ದರು. ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ನಮ್ಮ ಸರ್ಕಾರ ಮರುಜೀವ ನೀಡಿದ್ದು, ಈ ಯೋಜನೆ ಈಗ 117 ಕಿ.ಮೀ. ಉದ್ದದ ಅತ್ಯಾಧುನಿಕ "ಬೆಂಗಳೂರು ಬಿಸಿನೆಸ್ ಕಾರಿಡಾರ್" ಆಗಿ ಕಾರ್ಯರೂಪಕ್ಕೆ ಬರಲಿದೆ. ಇದು ಬೆಂಗಳೂರಿನ ಟ್ರಾಫಿಕ್ ಜಾಮ್ ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ನಗರದ ಸರ್ವತೋಮುಖ ಬೆಳವಣಿಗೆಗೆ ಹೊಸ ವೇಗವನ್ನು ನೀಡಲಿದೆ. ಬಿಸಿನೆಸ್ ಕಾರಿಡಾರ್‌ಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ್ದರು.












Click it and Unblock the Notifications