1,777 ಎಕರೆ ಭೂಸ್ವಾಧೀನ: ಭೂಮಿಗೆ ಚಿನ್ನದ ಬೆಲೆ ಕೊಟ್ಟರೂ ಕೊಡಲ್ಲ ಎಂದ ಆಸ್ತಿದಾರರು!
ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಪ್ರದೇಶದ ದೇವನಹಳ್ಳಿಯಲ್ಲಿ ಫಲವತ್ತಾದ 1,777 ಎಕರೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ಈ ಭಾಗದ ರೈತರು ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರವು ಈ ಭಾಗದಲ್ಲಿನ ಭೂಮಿಗೆ ಬಂಗಾರದ ಬೆಲೆ ಕೊಡುವುದಕ್ಕೆ ಮುಂದಾಗಿದೆ. ಆದರೆ ರೈತರು ಇದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಇದು ರೈತರು ಹಾಗೂ ಕರ್ನಾಟಕ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ರೈತರ ಹೆಸರಿನಲ್ಲಿ ಕೆಲವರು ಹೋರಾಟ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ. ಆದರೆ, ಈ ಹೇಳಿಕೆಗೂ ವಿರೋಧ ವ್ಯಕ್ತವಾಗುತ್ತಿದೆ.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದು ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ನಾಳೆ ತೀರ್ಮಾನ ತಿಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜುಲೈ 15ರಂದು ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಎಕರೆಗೆ 3.5 ಕೋಟಿ ಕೊಡುವುದಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಎಂ. ಬಿ ಪಾಟೀಲ್ ಅವರು ಹೇಳಿದ್ದಾರೆ.

449 ಎಕರೆ ಜಮೀನು ಬಿಟ್ಟುಕೊಡುತ್ತೇವೆ: ಇನ್ನು 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆ ರೈತರು ವಿರೋಧ ವ್ಯಕ್ತಪಡಿಸಿದ್ದು. ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ನಡುವೆ ಕೆಲವು ರೈತರು 449 ಎಕರೆ ಜಮೀನನ್ನು ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿರುವ ರೈತರು ಜಾಗ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ರೈತರು ಜಾಗ ಬಿಟ್ಟು ಕೊಡುತ್ತೇವೆ ಎಂದು ಹೇಳಿರುವುದನ್ನು ಸ್ವಾಗತಿಸಿರುವುದಾಗಿ ಸರ್ಕಾರ ಹೇಳಿದೆ.
ಅಲ್ಲದೇ ಭೂಮಿ ಬಿಟ್ಟು ಕೊಡುವವರಿಗೆ ಒಳ್ಳೆಯ ಬೆಲೆ ಕೊಡಲಿದ್ದೇವೆ. ಈ ಭಾಗದಲ್ಲಿ ಪ್ರತಿ ಎಕರೆ ಭೂಮಿಗೆ ರಾಜ್ಯ ಸರ್ಕಾರವು 3.5 ಕೋಟಿ ಕೊಡಲಿದ್ದೇವೆ ಎಂದು ಹೇಳಿದೆ. ಆದರೆ ಭೂಮಿಗೆ ನೀವು ಚಿನ್ನದ ಬೆಲೆಯನ್ನೇ ಕೊಟ್ಟರೂ ನಾವು ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಭೂಮಿ ಕೊಡುವುದಾಗಿ ಹೇಳಿದವರು ರೈತರಲ್ಲ!
ಇನ್ನು ಭೂಮಿ ಕೊಡಲು ಮುಂದೆ ಬಂದಿರುವವರು ರೈತರಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದವರು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರಲ್ಲ ಎಂದು ಹೇಳಿದ್ದಾರೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಈ ಮೂಲಕ ಸ್ಪಷ್ಟಪಡಿಸುವುದು ಏನೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸೂಕ್ತ ಬೆಲೆ ನೀಡಿದರೆ ಭೂಮಿ ನೀಡಲು ಸಿದ್ಧ ಎಂದು ಮನವಿ ಮಾಡಿರುವ ತಂಡಕ್ಕೂ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಸಮಿತಿ'ಗೂ ಯಾವುದೇ ಸಂಬಂಧ ಇರುವುದಿಲ್ಲ. 13 ಹಳ್ಳಿಗಳ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂಬ 1194 ದಿನಗಳ ಬೇಡಿಕೆಗೆ ಸಮಿತಿಯು ಬದ್ಧವಾಗಿದೆ ಎಂದು ಹೇಳಿದೆ.












Click it and Unblock the Notifications