ಬೆಂಗಳೂರಲ್ಲಿ 1700 ಕೋಟಿ ರೂ. ವೆಚ್ಚದಲ್ಲಿ 161.78 ಕಿ.ಮೀ ವೈಟ್ ಟಾಪಿಂಗ್, ಕಾಮಗಾರಿ ವಿಳಂಬಕ್ಕೆ ಇದೇ ಕಾರಣ!
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದೆ. ಇದೀಗ ನಗರದ ಹೃದಯಭಾಗ ಸೇರಿದಂತೆ ಕೆಲವೊಂದು ಭಾಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಚುರುಕು ಪಡೆದುಕೊಂಡಿದೆ. ಆದರೆ ವೈಟ್‌ಟಾಪಿಂಗ್ ಕಾಮಗಾರಿಯು ವಿಳಂಬವಾಗುತ್ತಿದೆ ಎನ್ನುವ ಆರೋಪವು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದೀಗ ಯಾವ ಕಾರಣಕ್ಕೆ ವೈಟ್‌ಟಾಪಿಂಗ್ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದೆ.
ಜಿಬಿಎ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ವೇಗ ನೀಡಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಸ್ಮೈಲ್ ಮುಖ್ಯ ಎಂಜಿನಿಯರ್ ಡಾ. ರಾಘವೇಂದ್ರ ಪ್ರಸಾದ್ ಅವರು ಹೇಳಿದ್ದಾರೆ. ನಗರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆದೇಶ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರ ನಿರ್ದೇಶನದ ಮೇರೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವ ಕಡೆ ವೇಗ ನೀಡಿ, ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.

1700 ಕೋಟಿ ರೂ. ವೆಚ್ಚ: 161.78 ಕಿ.ಮೀ ಉದ್ದದ ವೈಟ್ ಟಾಪಿಂಗ್
ಇನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅನುದಾನವಾದ 800 ಕೋಟಿ ರೂ. ಹಾಗೂ ಎಸ್ಕ್ರೋ ಅನುದಾನದವಾದ 900 ಕೋಟಿ ರೂ. ಸೇರಿದಂತೆ ಒಟ್ಟು 1700 ಕೋಟಿ ರೂ. ವೆಚ್ಚದಲ್ಲಿ 161.78 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಒಟ್ಟು 16 ಪ್ಯಾಕೇಜ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಈ ಪೈಕಿ ಪ್ರಸ್ತುತ 14 ಪ್ಯಾಕೇಜ್ ಗಳಲ್ಲಿ 1487 ಕೋಟಿ ರೂ. ವೆಚ್ಚದಲ್ಲಿ 145.68 ಕಿ.ಮೀ ಉದ್ದದ 104 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸಿದ್ದು, 16.1 ಕಿ.ಮೀ ಉದ್ದದ 14 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
488 ಕಿ.ಮೀ ಉದ್ದದ ರಸ್ತೆಗೆ ಪ್ರಸ್ತಾವನೆ: ಇನ್ನು 2016 ರಿಂದ 2023 ರವರೆಗೆ 124.17 ಕಿ.ಮೀ ಉದ್ದದ 47 ರಸೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. 2023-24ರಲ್ಲಿ ಪ್ರಸ್ತುತ 145.68 ಕಿ.ಮೀ ಉದ್ದದ 104 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. 2025-28 ರವರೆಗೆ 488 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ಉದ್ದೇಶವಿದ್ದು, ಅದಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣಗಳು
ಇನ್ನು ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯ ವೇಳೆ ಪ್ರಮುಖವಾಗಿ ಕಂಡುಬರುವ ಸಮಸ್ಯೆಗಳೆಂದರೆ ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಪಡೆಯುವುದಾಗಿದೆ. ಜೊತೆಗೆ ಜಲಮಂಡಳಿಯಿಂದ ಕುಡಿಯುವ ನೀರಿನ ಪೈಪ್ ಲೈನ್, ಒಳಚರಂಡಿ ವ್ಯವಸ್ಥೆಯ ಸ್ಥಳಾಂತರ/ಕಾಮಗಾರಿ ತ್ವರತವಾಗಿ ಪೂರ್ಣಗೊಳಿಸದೇ ಇರುವುದಾಗಿದೆ. ಪಾಲಿಕೆಯು ಕಾಮಗಾರಿ ವೇಳೆ ಸಮಸ್ಯೆಯಿರುವ ಕಡೆ ಸಮನ್ವಯ ಸಾಧಿಸಿ ಕಾಮಗಾರಿಗೆ ವೇಗ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications