ಸಿಎಂ ರಾಜೀನಾಮೆ ಬಗ್ಗೆ ಸತೀಶ್ ಜಾರಕಿಹೊಳಿ ಮಹತ್ವದ ಮಾಹಿತಿ
ಮುಡಾ ಕೇಸ್‌ನಿಂದಾಗಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ವಿಚಾರ ಹೇಳಿದ್ದಾರೆ. ಲೋಕಾಯುಕ್ತ, ಇಡಿ ಅಲ್ಲ, ಸಿಬಿಐ ತನಿಖೆಯಾದರೂ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಡಾ ಕೇಸ್ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವ ಸಂಬಂಧ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಇಡಿ ದಾಳಿಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಇಡಿ ಅಧಿಕಾರಿಗಳು ಸಿಎಂ ನಿವಾಸದ ಮೇಲೆ ದಾಳಿ ನಡೆಸಿಲ್ಲ ಎಂದಿದ್ದಾರೆ.

ಮುಡಾ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಜಾಗಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಇಡಿ ಇಡಿ ದಾಳಿಗೂ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಏನೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಇಡಿ ಅಧಿಕಾರಿಗಳು ಮುಡಾ ಕೇಸ್‌ನ ವಿಚಾರಣೆ ನಡೆಸುತ್ತಿದ್ದಾರೆ. ಅವರಿಗೆ ಬೇಕಾಗಿರುವ ಸಂಬಂಧ ತನಿಖೆ ಮಾಡುತ್ತಾರೆ. ಮುಡಾಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಸರ್ಕಾರದ ಬಳಿ ಇರುತ್ತೆ. ಯಾವ ದಾಖಲೆಗಳೂ ಮಿಸ್ ಆಗಲು ಸಾಧ್ಯವೇ ಇಲ್ಲ ಎಂದೂ ಹೇಳಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ದಾಖಲೆ ನಾಶ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಸಾಬೀತಾಗಲಿ. ಹಾಗೇನಾದರೂ ನಡೆದಿದ್ದರೆ, ಅದು ತನಿಖೆಯಿಂದ ಹೊರಬರುತ್ತೆ. ಇಡಿ ಅಧಿಕಾರಿಗಳ ತನಿಖೆ ಆಗುವವರೆಗೂ ಕಾದು ನೋಡಬೇಕು. ಯಾವುದಕ್ಕೂ ಈಗ ಅರ್ಜೆಂಟ್ ಇಲ್ಲ ಎಂದಿದ್ದಾರೆ.
ಇಂದು ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯನ್ನು ಮಠದಲ್ಲಿ ಆಯೋಜಿಸಿದ್ದರು. ಇದರ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು, ಸಭಾಭವನಗಳಲ್ಲಿ ಸಭೆ ಕರೆಯಲಾಗುತ್ತಿತ್ತು. ಆದರೆ ಇಂದಿನ ಸಭೆಯು ಹುಕ್ಕೇರಿ ಹೊರವಲಯದ ಅವಜೀಕರ ಆಶ್ರಮ ಮಠದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಸಚಿವ ಸತೀಶ್, ಸ್ಥಳದ ಅಭಾವದಿಂದ ಮಠದಲ್ಲಿ ಸಭೆ ನಡೆಸಲಾಯಿತು. ಅದರಲ್ಲಿ ಏನೂ ವಿಶೇಷವಿಲ್ಲ ಎಂದು ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಕೂಡ ಹೋಗಿಬಂದಲ್ಲೆಲ್ಲ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗುತ್ತಿದ್ದರು.
ತುಮಕೂರಿನಲ್ಲಿ ನಡೆದ ದಲಿತರ ಸಭೆಯಲ್ಲೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಘೋಷಣೆ ಕೇಳಿಬಂದಿತ್ತು. ಸತೀಶ್ ಜಾರಕಿಹೊಳಿ ಸಮ್ಮುಖದಲ್ಲೇ ಈ ಘೋಷಣೆ ಕೂಗಿದರೂ ಎಲ್ಲರೂ ಸುಮ್ಮನೆ ಇದ್ದರು. ಮೊದಲಿನಿಂದಲೂ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿಬರುತ್ತಲೇ ಇತ್ತು. ಸತೀಶ್ ಜಾರಕಿಹೊಳಿ ಅವರ ನಡೆ ಕೂಡ ಸಿಎಂ ರೇಸ್‌ನಲ್ಲಿರುವ ಸುಳಿವು ನೀಡಿತ್ತು. ಬಳಿಕ ಅವರೇ ಸಾಕಷ್ಟು ಬಾರಿ ಸ್ಪಷ್ಟನೆಯೂ ನೀಡಿದ್ದರು.












Click it and Unblock the Notifications