ಪ್ರವಾಹದಲ್ಲಿ ಚೆಲ್ಲಾಪಿಲ್ಲಿಯಾದ ಬದುಕು; ವಾಸನ ಗ್ರಾಮ ನೋಡುವವರಾರು?

ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿ ಎರಡು ತಿಂಗಳುಗಳೇ ಕಳೆದುಹೋದವು. ಕಾಲವೇನೋ ಕಳೆಯಿತು, ಆದರೆ ಈ ಪ್ರವಾಹದಿಂದಾಗಿ ಬೀದಿಗೆ ಬಿದ್ದ ಅದೆಷ್ಟೋ ಗ್ರಾಮಸ್ಥರ ಬದುಕಿನ ಬವಣೆ ಮಾತ್ರ ಕಳೆಯುವಂತೆ ತೋರುತ್ತಿಲ್ಲ.

ಪ್ರಕೃತಿಯ ಈ ಅನಿರೀಕ್ಷಿತ ಹೊಡೆತಕ್ಕೆ ಕಂಗಾಲಾಗಿರುವ ಜನರಿಗೆ ಅಧಿಕಾರಿಗಳ ನಿರ್ಲಕ್ಷ್ಯತನ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ತಾತ್ಕಾಲಿಕ ಶೆಡ್ ಗಳನ್ನಷ್ಟೇ ನಿರ್ಮಿಸಿ ಕೈ ತೊಳೆದುಕೊಂಡಿರುವ ಅಧಿಕಾರಿವರ್ಗ ಈ ಜನರ ಕಥೆಗಳನ್ನು ಕೇಳಲು ತಿರುಗಿಯೂ ನೋಡಿಲ್ಲ. ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡು ಬರಿಗೈಯಾಗಿರುವ ಗದಗ ಜಿಲ್ಲೆ ನರಗುಂದ ತಾಲೂಕಿನ ವಾಸನ ಗ್ರಾಮದ ಜನರ ಬದುಕಿನ ಪುಟ್ಟ ಚಿತ್ರಣವೊಂದು ಇಲ್ಲಿದೆ...

 ಒಂದೊಂದು ದಿನ ಕಳೆಯುವುದೂ ಸಾಹಸ

ಒಂದೊಂದು ದಿನ ಕಳೆಯುವುದೂ ಸಾಹಸ

ಅಲೆಮಾರಿಗಳಂತೆ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು... ಸ್ನಾನ ಮಾಡಲೂ ಸರಿಯಾದ ಕೊಠಡಿಯಿಲ್ಲದೇ ಸೀರೆ‌ ಅಡ್ಡಗಟ್ಟಿ ಸ್ನಾನ ಮಾಡಬೇಕಾದ ಪರಿಸ್ಥಿತಿ. ತಿನ್ನಲು ಮೇವಿಲ್ಲದೆ ಮಳೆ ಗಾಳಿ ಚಳಿಗೆ ಮೈಯೊಡ್ಡಿ ಸಂಕಷ್ಟ ಅನುಭವಿಸುತ್ತಿರುವ ಜಾನುವಾರಗಳು... ಇದು ಗದಗ ಜಿಲ್ಲೆ ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ಕಂಡುಬರುವ ದೃಶ್ಯ.

ಎರಡು ತಿಂಗಳ‌ ಹಿಂದೆ ಬಂದ‌ ಮಲಪ್ರಭಾ ಪ್ರವಾಹದಿಂದ, ವಾಸನ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತವಾಗಿ ಕಾಳಜಿ ಕೇಂದ್ರದಲ್ಲಿ ವಾಸವಾಗಿವೆ. ಒಂದೊಂದು ದಿನ ಕಳೆಯೋದೂ ಇಲ್ಲಿ ನರಕ ಯಾತನೆ. ಬೆಳಿಗ್ಗೆ ಎದ್ದ ತಕ್ಷಣ ಶೌಚಾಲಯಕ್ಕೆ ಹೋಗಲು ಯಾವುದೇ ವ್ಯವಸ್ಥೆ‌ ಇಲ್ಲದೆ ಬೆಳಕು ಮೂಡುವ ಮುನ್ನವೇ ಬಯಲು ಶೌಚಾಲಯದತ್ತ ಹೆಜ್ಜೆ ಇಡಬೇಕಾಗಿದೆ.

 ಸೀರೆ ಅಡ್ಡಗಟ್ಟಿ ಸ್ನಾನ

ಸೀರೆ ಅಡ್ಡಗಟ್ಟಿ ಸ್ನಾನ

ತಾವು, ತಮ್ಮ ಮಕ್ಕಳಿಗೆ ಸ್ನಾನ ಮಾಡಿಸುವುದು ತಾಯಂದಿರಿಗೆ ದೊಡ್ಡ ತಲೆನೋವಾಗಿದೆ. ಸ್ನಾನಗೃಹ ಇಲ್ಲದೆ ಸೀರೆ ಅಡ್ಡಗಟ್ಟಿ ಸ್ನಾನ ಮಾಡುವ ದುಸ್ಥಿತಿ‌ ಬಂದಿದೆ. ಇತ್ತ ಕುಡಿಯಲು ನೀರಿಲ್ಲದೇ ಬೋರ್ ನೀರನ್ನೇ ಸೇವಿಸುತ್ತಿದ್ದಾರೆ. ತಾತ್ಕಾಲಿಕ ಶೆಡ್ ಗಳನ್ನಷ್ಟೇ ಮಾಡಿಕೊಟ್ಟಿರುವ ಗದಗ ಜಿಲ್ಲಾಡಳಿತ ಇನ್ನಿತರ ಯಾವುದೇ ಮೂಲ ಸೌಕರ್ಯಗಳನ್ನು ಇವರಿಗೆ ಒದಗಿಸಿಲ್ಲ. ಪ್ರವಾಹ ಬಂದು ನಿಂತ ಮೇಲಂತೂ ಸಂತ್ರಸ್ತರ ಬದುಕು ನರಕಕ್ಕಿಂತಲೂ ಕೊನೆಯಾಗಿದೆ.

 ಮೂಕ ಪ್ರಾಣಿಗಳ ಗೋಳು ಕೇಳುವವರಾರು?

ಮೂಕ ಪ್ರಾಣಿಗಳ ಗೋಳು ಕೇಳುವವರಾರು?

ಈ ಪರಿಸ್ಥಿತಿಯನ್ನು ತಹಬದಿಗೆ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಅಧಿಕಾರಿವರ್ಗ ತಲೆಕೆಡಿಸಿಕೊಂಡಿಲ್ಲ. ಸಂತ್ರಸ್ತರ ಬದುಕು ಈ ರೀತಿಯದ್ದಾದರೆ, ಮೂಕ ಪ್ರಾಣಿಗಳ ಗೋಳಾಟವಂತೂ ಕೇಳುವವರಿಲ್ಲ. ಯಾವುದೇ ನೆರಳಿಲ್ಲದೇ ಮಳೆ ಗಾಳಿ‌ಯೆನ್ನದೇ ಜಾನುವಾರಗಳು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಅವಕ್ಕೆ ಸೂಕ್ತ ಮೇವಿಲ್ಲ, ನೆರಳಿಲ್ಲದೆ ಬೀದಿಯಲ್ಲೇ ಬದುಕುತ್ತಿವೆ. ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ‌ ಇಲ್ಲದಿರುವುದರಿಂದ ಪ್ರವಾಹದಿಂದ ನಿಂತ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗದ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ.

 ಮೂಲಸೌಲಭ್ಯಗಳ ಮಾತೆಲ್ಲಿ!

ಮೂಲಸೌಲಭ್ಯಗಳ ಮಾತೆಲ್ಲಿ!

ಸಂತ್ರಸ್ತರ ದಿನನಿತ್ಯದ ಅವಶ್ಯಕತೆಗಳಿಗೆ ಮೂಲ ಸೌಕರ್ಯಗಳತ್ತ ಯಾರೂ ಗಮನ ಹರಿಸಿಲ್ಲ.‌ ಇಷ್ಟೆಲ್ಲಾ ಸಮಸ್ಯೆಗಳು ಕಣ್ಣಿಗೆ ರಾಚುತ್ತಿದ್ದರೂ ಗದಗ ಡಿಸಿ ಎಂ.ಜಿ‌. ಹಿರೇಮಠ, ನಾವೆಲ್ಲಾ ಅನುಕೂಲ ಕಲ್ಪಿಸಿದ್ದೇವೆ ಅಂತಲೇ ಹೇಳುತ್ತಿದ್ದಾರೆ. ನೆರೆ ಪರಿಹಾರದ ರೂಪದಲ್ಲಿ ಹಣ ಬಂದಿದೆ. ಆದರೆ‌ ಅಧಿಕಾರಿವರ್ಗ ಆಸಕ್ತಿ ವಹಿಸಿ ಸಂತ್ರಸ್ತರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಕಾಟಾಚಾರಕ್ಕೆ ಕೆಲವು ಕೆಲಸ ಮಾಡಿ ಕೈ ತೊಳೆದುಕೊಳ್ಳುತ್ತಿದೆ.

ಇಂದಲ್ಲಾ ನಾಳೆ ಎಲ್ಲವೂ ಸರಿಹೋಗಬಹುದು ಎಂಬ ಒಂದೇ ಒಂದು ನಿರೀಕ್ಷೆಯೊಂದಿಗೆ ಜೀವನ ಸಾಗಿಸುತ್ತಿರುವ ಈ ಸಂತ್ರಸ್ತರ ಬದುಕು ಯಾವಾಗ ಸರಿದಾರಿಗೆ ಬರಬಹುದು? ಯಾವಾಗ ಮೊದಲಿನಂತಾಗಬಲ್ಲದು?...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+