Vande Bharat Train: ಮೋದಿ ಸ್ವಾಗತಿಸಿ ಬೇಡಿಕೆ ಇಟ್ಟ ಬೆಳಗಾವಿ ಜನರು
ಬೆಳಗಾವಿ, ಏಪ್ರಿಲ್ 28: ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ್ದಾರೆ. ಕರ್ನಾಟಕದ ಕುಂದಾ ನಗರಿಯ ಜನರು ಪ್ರೀತಿಯಿಂದ ಅವರನ್ನು ಸ್ವಾಗಿತಿಸಿದ್ದಾರೆ. ಅಲ್ಲದೇ ತಮ್ಮ ಬಹು ಕಾಲದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಚಿಕ್ಕೋಡಿಯ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ.

ಶನಿವಾರ ಸಂಜೆಯೇ ಗೋವಾದಿಂದ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಅವರನ್ನು ಬರಮಾಡಿಕೊಂಡರು. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ ಹೂಡಿದ್ದಾರೆ.
ಮೋದಿ ಮುಂದೆ ಬೇಡಿಕೆ ಇಟ್ಟ ಜನರು: ಬೆಳಗಾವಿ ರೈಲು ಗಾಡಿ ಎಂಬ ಟ್ವೀಟ್ ಖಾತೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬೆಳಗಾವಿಗೆ ಸ್ವಾಗತ ಮಾಡಲಾಗಿದೆ. ಅಲ್ಲದೇ ಅವರ ಮುಂದೆ ಬೇಡಿಕೆಯೊಂದನ್ನು ಇಡಲಾಗಿದೆ.
'ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ಸ್ವಾಗತ. ಸರ್ ನಾವು ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿಗೆ ವಿಸ್ತರಣೆ ಆಗುವುದಕ್ಕೆ ಕಾಯುತ್ತಿದ್ದೇವೆ' ಎಂದು ಟ್ವೀಟ್ ಮಾಡಲಾಗಿದೆ.
'ರೈಲ್ವೆ ಬೋರ್ಡ್ ರೈಲು ಸೇವೆ ವಿಸ್ತರಣೆಗೆ ಒಪ್ಪಿಗೆ ನೀಡಿದ್ದರೂ ಸಹ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಒಪ್ಪಿಗೆ ಕೊಟ್ಟಿಲ್ಲ. ನೀವು ಮೂರನೇ ಅವಧಿಗೆ ಪ್ರಧಾನಿ ಆಗುವುದಕ್ಕೆ ಕಾಯುತ್ತಿದ್ದೇವೆ' ಎಂದು ಟ್ವೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಹಲವು ದಿನಗಳ ಬೇಡಿಕೆ: ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿದೆ. ರೈಲ್ವೆ ಇಲಾಖೆ ಜನಪ್ರತಿನಿಧಿಗಳ, ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ.
ಬೆಂಗಳೂರು-ಬೆಳಗಾವಿ ತನಕ ಪ್ರಾಯೋಗಿಕ ಸಂಚಾರವೂ 2023ರ ನವೆಂಬರ್‌ನಲ್ಲಿ ಮುಗಿದಿದೆ. ಆದರೆ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಈ ಕುರಿತು ಆರ್‌ಟಿಐ ಮೂಲಕವೂ ರೈಲ್ವೆ ಇಲಾಖೆಯ್ನು ಪ್ರಶ್ನೆ ಮಾಡಲಾಗಿದೆ.
ಮೇ 7ರಂದು ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಜಗದೀಶ್ ಶೆಟ್ಟರ್ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆಗ ಧಾರವಾಡ ಮೂಲದ ಜಗದೀಶ್ ಶೆಟ್ಟರ್‌ಗೆ ಧಾರವಾಡದಿಂದ ವಂದೇ ಭಾರತ್ ರೈಲು ತನ್ನಿ ಎಂದು ಟ್ವೀಟ್ ಮೂಲಕ ಬೇಡಿಕೆ ಇಡಲಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಮುಂದೆಯೂ ವಂದೇ ಭಾರತ್‌ಗಾಗಿ ಬೇಡಿಕೆ ಸಲ್ಲಿಕೆಯಾಗಿದೆ.
ಈಗಾಗಲೇ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ರೈಲು ನಂಬರ್ 20661/ 20662 ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗೆ ರೈಲ್ವೆ ಇಲಾಖೆಯೂ ಒಪ್ಪಿಗೆ ನೀಡಿ, ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿದೆ. ಆದರೆ ರೈಲು ಏಕೆ ಸಂಚಾರ ನಡೆಸುತ್ತಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ.
ಪ್ರಾಯೋಗಿಕ ಸಂಚಾರದ ಸಮಯದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ಕೆಲವು ಮೂಲ ಸೌಲಭ್ಯಗಳು ಲಭ್ಯವಿಲ್ಲ ಎಂಬುದನ್ನು ಗಮನಿಸಲಾಗಿತ್ತು. ಅವುಗಳ ಕಾರ್ಯ ಪೂರ್ಣಗೊಳ್ಳುವ ತನಕ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸದಿರಲು ರೈಲ್ವೆ ಇಲಾಖೆ ತೀರ್ಮಾನಿಸಿತ್ತು. ಅಷ್ಟರಲ್ಲಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.












Click it and Unblock the Notifications