ಕುಡಿದ ನಶೆಯಲ್ಲಿ ಕೊಲೆ ಮಾಡಿ ಶೌಚಾಲಯದಲ್ಲಿ ಬಿಸಾಡಿದ ಸ್ನೇಹಿತರು
ಬೆಳಗಾವಿ, ಸೆಪ್ಟೆಂಬರ್ 30: ಕುಡಿದ ನಶೆಯಲ್ಲಿ ಮೂವರು ಸ್ನೇಹಿತರು ಸೇರಿಕೊಂಡು ತಮ್ಮ ಮತ್ತೊಬ್ಬ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಳೆದ ಎರಡು ತಿಂಗಳಿನಿಂದ ನಗರದ ರಾಜಪುರೋಹಿತ ಲಾಡ್ಜ್ ನಲ್ಲಿ ಈ ನಾಲ್ವರು ಒಂದೇ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಭಾನುವಾರ ರಾತ್ರಿ ಎಲ್ಲ ಸ್ನೇಹಿತರು ಸೇರಿ ಪಾರ್ಟಿ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ನಡುವೆ ಜಗಳ ಶುರುವಾಗಿದೆ. ಜಗಳ, ಮಾತುಕತೆ ವಿಕೋಪಕ್ಕೆ ತಿರುಗಿ ವಿನಾಯಕ ಎಂಬಾತನನ್ನು ಶೌಚಾಲಯದಲ್ಲಿ ಕೊಲೆ ಮಾಡಿ ಹಾಕಿದ್ದಾರೆ. ಕುಡಿದ ನಶೆ ಇಳಿದ ಮೇಲೆ ಇವರೆಲ್ಲರೂ ಎಂದಿನಂತೆ ತಮ್ಮ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ಲಾಡ್ಜ್ ಮಾಲೀಕ ವಿನಾಯಕನ ಬಗ್ಗೆ ವಿಚಾರಿಸಿದಾಗ, "ಅವನು ಬಂದಿಲ್ಲ, ಹೊರಗೆ ಹೋಗಿದ್ದಾನೆ" ಎಂದು ಸುಳ್ಳು ಹೇಳಿದ್ದಾರೆ. ಆದರೆ ಅನುಮಾನಗೊಂಡ ಲಾಡ್ಜ್ ಮಾಲೀಕ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ಮೂವರು ಸೇರಿಕೊಂಡು ವಿನಾಯಕನೊಂದಿಗೆ ಜಗಳವಾಡುತ್ತಿರುವುದು ಸ್ಪಷ್ಟವಾಗಿ ಕಂಡಿದೆ.

ನಂತರ ಲಾಡ್ಜ್ ನ ಸಿಬ್ಬಂದಿಯನ್ನು ಪರಿಶೀಲಿಸಲು ಹೇಳಿದ್ದಾರೆ. ಆತ ಶೌಚಾಲಯದ ಕಡೆ ಹೋದಾಗ ವಿನಾಯಕ ಕೊಲೆಯಾಗಿ ಬಿದ್ದಿರುವುದು ಕಂಡಿದೆ. ಕೂಡಲೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕೊಲೆಗೈದ ಆರೋಪಿಗಳಾದ ಅಮೀತ, ಶಶಿಕುಮಾರನನ್ನು ಬಂಧಿಸಿದ್ದಾರೆ.












Click it and Unblock the Notifications