Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
ಬೆಳಗಾವಿ, ಏಪ್ರಿಲ್. 19: ಒಂದೆಡರು ಕಡೆ ಮಳೆ ಬಂದಿದ್ದರೂ ಕೂಡ ಇನ್ನೂ ಬಿಸಿಲಿನ ಧಗೆ ಕಡಿಮೆಯಾಗಿಲ್ಲ. ಬೆಳಗ್ಗೆ ಹತ್ತು ಗಂಟೆ ಬಳಿಕ ಮನೆಯಿಂದ ಹೊರಗೆ ಕಾಲಿಡುವುದು ಕೂಡ ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಜನ ತಂಪಗಿನ ಮಜ್ಜಿಗೆ, ಪಾನಕ, ಜ್ಯೂಸ್‌ನ ಮೊರೆ ಹೋಗುತ್ತಿದ್ದಾರೆ.
ಈ ಸಮಯದಲ್ಲಿ ಆರೋಗ್ಯಕ್ಕೆ ಮತ್ತು ಬಾಯಾರಿಕೆ ಕಡಿಮೆ ಮಾಡುವಂತಹ ಪಾನಕಗಳು ಹೆಚ್ಚು ಉತ್ತಮವಾಗಿರುತ್ತವೆ. ಅಂತಹುಗಳ ಸಾಲಿನಲ್ಲಿ ಬರುವುದೇ ಹುಣಸೇ ಹಣ್ಣಿನ ಪಾನಕ. ಹೌದು... ಅರೋಗ್ಯಕಾರಿ ಹುಣಸೆ ಹಣ್ಣಿನ ಪಾನಕ ಕೂಡ ಮಾಡಬಹುದು. ಇದನ್ನು ಬಳಸಿಕೊಂಡು ಜನರಿಗಾಗಿ ಕರ್ನಾಟಕ ಆಯುಷ್ ಇಲಾಖೆ ಹೊಸ 'ಚಿಂಚಾ ಪಾನಕ' ಪರಿಚರಿಸಿದೆ.

ಹುಣಸೆ ಹಣ್ಣಿನ ಪಾನಕ (ಚಿಂಚಾ ಪಾನಕ)
ಬಿಸಿಲಿನ ಬೇಗೆ ತೀವ್ರವಾಗಿರುವುದರಿಂದ ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸಲು ಸರ್ಕಾರದ ಆಯುಷ್ ಇಲಾಖೆ ಪರಿಚಯಿಸಿರುವ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ) ವನ್ನು ಸಾರ್ವಜನಿಕರು ಸೇವಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆಯ ವತಿಯಿಂದ ಆರೋಗ್ಯಕರ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ) ವನ್ನು ಸಾರ್ವಜನಿಕರು ಹಾಗೂ ಕರ್ತವ್ಯನಿರತ ಕಚೇರಿಯ ಸಿಬ್ಬಂದಿಗೆ ವಿತರಿಸಿದ್ದಾರೆ. ಜೊತೆಗೆ ಅದರ ಪ್ರಯೋಜನಗಳ ಬಗ್ಗೆಯೂ ಮಾತನಾಡಿದ್ದಾರೆ.
ಎಲ್ಲೆಡೆ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಆರೋಗ್ಯ ರಕ್ಷಣೆಗೆ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದರ ಜತೆಗೆ ಆಯುಷ್ ಇಲಾಖೆಯಿಂದ ಪರಿಚಯಿಸಲಾಗುವ ಪಾನಕ ಮತ್ತಿತರರ ಪಾನೀಯ ಸೇವಿಸುವಂತೆ ಕರೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಅವರು, ಹುಣಸೆ ಹಣ್ಣಿನ ಪಾನಕ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜತೆಗೆ ಇಂತಹ ಬಿಸಿಲಿನಲ್ಲಿ ಬಾಯಾರಿಕೆ ನಿವಾರಿಸಲು ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ.
ಹುಣಸೆ ಹಣ್ಣಿನ ಪಾನಕ ತಯಾರಿಸಲು ಬೇಕಾಗುವ ಪದಾರ್ಥಗಳು
* ಚೆನ್ನಾಗಿ ಹಣ್ಣಾದ ಹುಣಸೆ ಹಣ್ಣು (100 ಗ್ರಾಂ)
* ಬೆಲ್ಲದ ಪುಡಿ (400 ಗ್ರಾಂ)
* ಜೀರಿಗೆ ಪುಡಿ (10 ಗ್ರಾಂ)
* ಕಾಳು ಮೆಣಸಿನಪುಡಿ (5 ಗ್ರಾಂ)
* ಸೈಂದವ ಲವಣ (5 ಗ್ರಾಂ)
ಹುಣಸೆ ಹಣ್ಣಿನ ಪಾನಕ ತಯಾರಿಸುವ ವಿಧಾನ
* ಹುಣಸೆ ಹಣ್ಣನ್ನು ರಾತ್ರಿಯಿಡೀ ನೆನೆಸಿಡಬೇಕು
* ಮರುದಿನ ಬೆಳಗ್ಗೆಚೆನ್ನಾಗಿ ನೆನೆದ ಹುಣಸೆ ಹಣ್ಣನ್ನು ಕೈಯಿಂದ ಹಿಸುಕಿ ಬಾಟಲಿಗಳಲ್ಲಿ ರಸವನ್ನು ಚೆನ್ನಾಗಿ ಸೋಸಿಟ್ಟುಕೊಳ್ಳಬೇಕು.
* ಪಾನಕ ತಯಾರಿಕೆಗೆ ಬೇಕಾದಷ್ಟು ರಸವನ್ನು ಬಳಸಬಹುದು. ಉಳಿದಿದ್ದನ್ನು ಹಾಗೆ ಇಟ್ಟುಕೊಳ್ಳಬಹುದು.
* ಅಗತ್ಯ ಪ್ರಮಾಣದ ನೀರನ್ನು ಪಾತ್ರೆಗೆ ಹಾಕಿ ಹುಣಸೆ ಹಣ್ಣಿನ ಮಿಶ್ರಣವನ್ನು ಬೆರೆಸಿ ಇದರೊಂದಿಗೆ ಬೆಲ್ಲದ ಪುಡಿಯನ್ನು ಹಾಕಿ ಕರಗಿಸಬೇಕು.
* ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಮತ್ತು ಸೈಂದವ ಲವಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೇ ಪಾನಕ ಸಿದ್ಧವಾಗುತ್ತದೆ.
* ಪ್ರತಿದಿನ ಒಬ್ಬ ವ್ಯಕ್ತಿ 50 ರಿಂದ 100 ಮಿ.ಲೀ. ಪಾನಕವನ್ನು ಸೇವಿಸಬಹುದು.












Click it and Unblock the Notifications