ಬೆಳಗಾವಿ-ವಿಜಯನಗರ ವಿಶೇಷ ವಿಮಾನ: ದರ ಮತ್ತು ವೇಳಾಪಟ್ಟಿ
ಬೆಳಗಾವಿ, ಜನವರಿ 24: ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳ ಜನರಿಗೆ ಸ್ಟಾರ್ ಏರ್ ಸಿಹಿಸುದ್ದಿಯನ್ನು ನೀಡಿದೆ. ಎರಡು ನಗರದ ನಡುವೆ ವಿಮಾನ ಸೇವೆಯನ್ನು ಸ್ಟಾರ್ ಏರ್ ಘೋಷಣೆ ಮಾಡಿದೆ. ಜನವರಿ 25ರಿಂದ ಈ ವಿಶೇಷ ವಿಮಾನ ಸೇವೆ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ವಿಮಾನದ ದರ ಮತ್ತು ವೇಳಾಪಟ್ಟಿಯ ಮಾಹಿತಿ ನೀಡಲಾಗಿದೆ.
ಸ್ಟಾರ್ ಏರ್ ವಿಮಾನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮತ್ತು ವಿಜಯನಗರದಲ್ಲಿರುವ ವಿದ್ಯಾನಗರ ವಿಮಾನ ನಿಲ್ದಾಣ (ಜಿಂದಾಲ್) ನಡುವೆ ಸಂಚಾರವನ್ನು ನಡೆಸಲಿದೆ. 50 ಸೀಟುಗಳ ERG-145 ಸಂಖ್ಯೆಯ ವಿಮಾನ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ವೇಳಾಪಟ್ಟಿ, ದರ: ಸ್ಟಾರ್ ಏರ್ ಮಾಹಿತಿಯಂತೆ ಜನವರಿ 25 ಮತ್ತು 27ರಂದು ಈ ವಿಶೇಷ ವಿಮಾನ ಸಂಚಾರವನ್ನು ನಡೆಸಲಿದೆ. ಈ ಮಾರ್ಗದ ಪ್ರಯಾಣಕ್ಕೆ 1999 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಈಗಾಗಲೇ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.
ವೇಳಾಪಟ್ಟಿಯ ಪ್ರಕಾರ ಜನವರಿ 25ರಂದು ವಿಮಾನ ಸಂಖ್ಯೆ S5 9359 ವಿದ್ಯಾ ನಗರ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ಹೊರಡಲಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಜೆ 6.05ಕ್ಕೆ ತಲುಪಲಿದೆ. ಜನವರಿ 27ರಂದು S5 9371 ಸಂಖ್ಯೆಯ ವಿಮಾನ ಬೆಳಗಾವಿಯಿಂದ ಬೆಳಗ್ಗೆ 7.40ಕ್ಕೆ ಹೊರಡಲಿದ್ದು, ವಿದ್ಯಾ ನಗರಕ್ಕೆ 8.30ಕ್ಕೆ ತಲುಪಲಿದೆ.
ಉಭಯ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಈ ವಿಶೇಷ ವಿಮಾನ ಸೇವೆಯ ಪ್ರಾರಂಭಿಕ ದರವನ್ನು 1999 ರೂ. ಎಂದು ನಿಗದಿ ಮಾಡಲಾಗಿದೆ. ಪ್ರಯಾಣಿಕರು ಈ ವಿಶೇಷ ವಿಮಾನ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬೆಳಗಾವಿ-ವಿಜಯನಗರ ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರಯಾಣಿಕರ ಬೇಡಿಕೆಯಂತೆ ವಿಶೇಷ ವಿಮಾನಗಳನ್ನು ಓಡಿಸಲಾಗುತ್ತಿದೆ ಎಂದು ಸ್ಟಾರ್ ಏರ್ ಅಧಿಕಾರಿಗಳು ಹೇಳಿದ್ದಾರೆ.
ಜಿಂದಾಲ್ ವಿಮಾನ ನಿಲ್ದಾಣವು ವಿಜಯನಗರ ಜಿಲ್ಲೆಯ ವಿದ್ಯಾನಗರದ ಟೌನ್‌ಶಿಪ್ ಬಳಿ ಇದೆ. ಈ ವಿಮಾನ ನಿಲ್ದಾಣ ಖಾಸಗಿ ಒಡೆತನದಲ್ಲಿದೆ. ಆದರೆ ಸಾರ್ವಜನಿಕ ಸೇವೆಗೆ ಇದನ್ನು ಬಳಕೆ ಮಾಡಲು ಅವಕಾಶವಿದೆ. ಅಲ್ಲದೇ ರಾಜಕಾರಣಿಗಳು ವಿಶೇಷ ವಿಮಾನದ ಮೂಲಕ ವಿಜಯನಗರಕ್ಕೆ ಭೇಟಿ ನೀಡುವಾಗ ಈ ವಿಮಾನ ನಿಲ್ದಾಣವನ್ನು ಬಳಕೆ ಮಾಡುತ್ತಾರೆ.
ಬೆಳಗಾವಿ ಮತ್ತು ವಿಜಯನಗರ ನಡುವೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ವಿಶೇಷ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಾಣ ಮಾಡಲಾಗತ್ತಿದೆ.
ಹೊಸ ಟರ್ಮಿನಲ್ ಕಾಮಗಾರಿ ಶೇ 30ರಷ್ಟು ಮುಗಿದಿದೆ. ಇಲ್ಲಿಂದ ಕಾರ್ಗೋ ಸೇವೆಗಳನ್ನು ಆರಂಭಿಸಬೇಕು ಎಂದು ಹೆಚ್ಚಿನ ಬೇಡಿಕೆ ಇದೆ. 2025ರ ವೇಳೆಗೆ ಈ ಕಾಮಗಾರಿ ಪೂರ್ಣಗೊಂಡ ನಂತರ, ಈಗಾಗಲೇ ಅಸ್ತಿತ್ವದಲ್ಲಿರುವ ಟರ್ಮಿನಲ್ ಅನ್ನು ಕಾರ್ಗೋ ಸೇವೆಗಳಿಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.












Click it and Unblock the Notifications