ಬೆಳಗಾವಿ ಗಲಾಟೆ: ಎಂಇಎಸ್ ನಿಷೇಧಿಸಲು ಸರ್ಕಾರಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ

ಬೆಳಗಾವಿ, ಡಿಸೆಂಬರ್ 20: "ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಸಹಿಸಲು ಸಾಧ್ಯವಿಲ್ಲ," ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

"ಕನ್ನಡಿಗರ ಉದಾರತೆಯನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸುವ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ," ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಘಟನೆ ಸಂಬಂಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಇಂದು ವಿಧಾನಭೆಯಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದರು.

 ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

"ಕನ್ನಡದ ಧ್ವಜ ಕನ್ನಡಿಗರ ಹೆಮ್ಮೆ. ಆ ಧ್ವಜವನ್ನು ಕಿಡಿಗೇಡಿಗಳು ಮಹಾರಾಷ್ಟ್ರದಲ್ಲಿ ಸುಟ್ಟು ಹಾಕಿ ಅಗೌರವ ತೋರಿಸಿದ್ದಾರೆ. ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಇಡೀ ದೇಶದ ಆಸ್ತಿ. ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಆರೂವರೆ ಕೋಟಿ ಕನ್ನಡಿಗರು ಸೇರಿದಂತೆ ಇಡೀ ದೇಶಕ್ಕೆ ಮಾಡಿರುವ ಅವಮಾನ. ಇದು ಪುಂಡು, ಪೋಕರಿಗಳಿಗೆ ಏಕೆ ಆರ್ಥವಾಗುತ್ತಿಲ್ಲವೋ ಗೊತ್ತಿಲ್ಲ".

"ಬೆಳಗಾವಿಯ ಅನಗೋಳದಲ್ಲಿ ರಾಯಣ್ಣ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಶಿವಾಜಿಯವರು ಪ್ರತಿಮೆ ವಿರೂಪಗೊಳಿಸಲಾಗಿದೆ. ರಾಯಣ್ಣ, ಶಿವಾಜಿ, ಝಾನ್ಸಿರಾಣಿ ಲಕ್ಷ್ಮಿಬಾಯಿ ಈ ಎಲ್ಲರೂ ದೇಶಕ್ಕಾಗಿ ಹೋರಾಟ ಮಾಡಿದವರು".

"ಅಂತಹವರ ಪ್ರತಿಮೆಯನ್ನು ವಿರೂಪಗೊಳಿಸುವ ಕಿಡಿಗೇಡಿಗಳು ಬುದ್ಧಿಗೇಡಿಗಳು, ಚಾರಿತ್ರ್ಯಹೀನರು, ಅವಿವೇಕಿಗಳು. ಇಂತಹ ಸ್ವಾತಂತ್ರ್ಯ ಸೇನಾನಿಗಳಿಗೆ ಅವಮಾನ ಮಾಡಿದರೆ ಅದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ. ಅರ್ಥವಾಗುವಂತೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಪುಂಡು, ಪೋಕರಿಗಳನ್ನು ಗಡಿಪಾರು ಮಾಡಬೇಕು," ಎಂದು ಒತ್ತಾಯಿಸಿದರು.

 ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಾರೆ

ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಾರೆ

"ಎಂಇಎಸ್ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಾರೆ. ಕನ್ನಡಿಗರು ಉದಾರಿಗಳು, ಸ್ವಾಭಿಮಾನಿಗಳು. ಅದನ್ನೇ ಅವರು ದೌರ್ಬಲ್ಯ ಎಂದು ಭಾವಿಸಿ ತಗಾದೆ ತೆಗೆಯುತ್ತಿದ್ದಾರೆ. ಹೀಗಾಗಿ ಎಂಇಎಸ್ ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು," ಎಂದು ಸಲಹೆ ನೀಡಿದರು.

"ಕನ್ನಡಿಗರ ಉದಾರತೆಯನ್ನು ದೌರ್ಬಲ್ಯ ಎಂದು ಭಾವಿಸಿರುವ ಎಂಇಎಸ್‌ನವರು ಮೂರ್ಖರು, ದುರಹಂಕಾರಿಗಳು. ಪುಂಡಾಟಿಕೆ ಮಾಡುವವರನ್ನು ಸರ್ಕಾರ ಕಟ್ಟಿ ಹಾಕಬೇಕು. ಕನ್ನಡದ ನೆಲ, ಜಲ ಬೇಕು ಎನ್ನುವ ಈ ಪುಂಡರು ನಮ್ಮ ರಾಜ್ಯದಲ್ಲಿ ಇರಲು ಅರ್ಹರೇ ಅಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಬೇಕು".

 ರಾಯಣ್ಣ ಮತ್ತು ಶಿವಾಜಿಯವರ ಪ್ರತಿಮೆಗೆ ಅವಮಾನ

ರಾಯಣ್ಣ ಮತ್ತು ಶಿವಾಜಿಯವರ ಪ್ರತಿಮೆಗೆ ಅವಮಾನ

"ಎಲ್ಲ ಪಕ್ಷಗಳು ಒಂದಾಗಿ ಕನ್ನಡ ನಾಡು ಉಳಿಸುವ ಕೆಲಸ ಮಾಡಬೇಕು. ರಾಯಣ್ಣ ಮತ್ತು ಶಿವಾಜಿಯವರ ಪ್ರತಿಮೆಗೆ ಅವಮಾನ ಮಾಡಿದವರು ಯಾರೇ ಆಗಿರಲಿ, ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ನೀಚ ಕೆಲಸ ಮಾಡುವುದರಲ್ಲಿ ಎಂಇಎಸ್‌ನವರು ನಿಸ್ಸೀಮರು. ಪದೇ ಪದೇ ಕಿತಾಪತಿ ಮಾಡುವ, ಶಾಂತಿ ಕದಡುವುದು ಅವರ ಕೆಲಸ. ಇದನ್ನು ಇನ್ನು ಕನ್ನಡಿಗರು ಸಹಿಸಲು ಸಾಧ್ಯವೇ ಇಲ್ಲ. ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು," ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ಒತ್ತಾಯಿಸಿದರು.

 ಹಗರಣದಲ್ಲಿ ಬಿಜೆಪಿ ಸಚಿವರು; ಸಿದ್ದರಾಮಯ್ಯ ಆರೋಪ

ಹಗರಣದಲ್ಲಿ ಬಿಜೆಪಿ ಸಚಿವರು; ಸಿದ್ದರಾಮಯ್ಯ ಆರೋಪ

"ಬಿಜೆಪಿ ಸರ್ಕಾರದ ಸಚಿವರಾಗಿರುವ ಭೈರತಿ ಬಸವರಾಜ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿರುವ ಕುರಿತು ಶುಕ್ರವಾರ ನಾನು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆ".

"ಈ ಪ್ರಕರಣದಲ್ಲಿ ಇಬ್ಬರು ರಾಜಕಾರಣಿಗಳು ಆರೋಪಿ ಸ್ಥಾನದಲ್ಲಿದ್ದಾರೆ. ಒಬ್ಬರು ಭೈರತಿ ಬಸವರಾಜ್, ಇನ್ನೊಬ್ಬರು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್. ಇವರ ವಿರುದ್ಧ ನಕಲಿ ಸಹಿ, ಆಸ್ತಿ ಕಬಳಿಕೆ, ಕ್ರಿಮಿನಲ್ ಚಟುವಟಿಕೆ ಮುಂತಾದ ಗಂಭೀರ ಪ್ರಕರಣವಿದೆ," ಎಂದರು.

 ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ರಾಜೀನಾಮೆ

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ರಾಜೀನಾಮೆ

ಈ ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ತಪ್ಪಿಲ್ಲದಿದ್ದರೂ ಕೆ.ಜೆ. ಜಾರ್ಜ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರು ನ್ಯಾಯಾಲಯದ ಆದೇಶ ಇದ್ದರೂ ಭಂಡತನದಿಂದ ಇನ್ನೂ ರಾಜೀನಾಮೆ ನೀಡಿಲ್ಲ, ಈ ನಾಚಿಕೆಗೆಟ್ಟ ಸರ್ಕಾರ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು, ಅದನ್ನೂ ಮಾಡಿಲ್ಲ. ಈ ಪ್ರಕರಣವನ್ನು ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂದು ತೀರ್ಮಾನ ಮಾಡಿದ್ದೇವೆ.

ಆದರೆ ನಮ್ಮ ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಿದ್ದಾರೆ. ಚರ್ಚೆಗೆ ಅವಕಾಶ ನೀಡಿಲ್ಲ ಮತ್ತು ಬೈರತಿ ಬಸವರಾಜ್ ರಾಜೀನಾಮೆ ಪಡೆಯಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಧರಣಿ ಪ್ರಾರಂಭ ಮಾಡಿದ್ದೆವು. ರಾಜ್ಯದಲ್ಲಿ ಸಾಕಷ್ಟು ಗಂಭೀರ ಸಮಸ್ಯೆಗಳಿವೆ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಮಾಡಲಾಗಿದೆ, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಲಾಗಿದೆ, ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ, ಉತ್ತರ ಕರ್ನಾಟಕದ ಮಹದಾಯಿ, ಕೃಷ್ಣಾ ನದಿ ನೀರಿನ ವಿಚಾರ, ಎತ್ತಿನಹೊಳೆ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಿಟ್ ಕಾಯಿನ್, 40% ಕಮಿಷನ್ ವಿಚಾರ ಮುಂತಾದ ಗಂಭೀರ ವಿಷಯಗಳ ಚರ್ಚೆ ನಡೆಸುವ ಉದ್ದೇಶದಿಂದ ಧರಣಿ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.

 ಒಂದು ವಾರದ ಕಾಲ ಅಧಿವೇಶನ ವಿಸ್ತರಣೆಗೆ ಪತ್ರ

ಒಂದು ವಾರದ ಕಾಲ ಅಧಿವೇಶನ ವಿಸ್ತರಣೆಗೆ ಪತ್ರ

ಈ ಎಲ್ಲಾ ವಿಷಯಗಳ ಚರ್ಚೆಗೆ ಸಮಯಾವಕಾಶದ ಕೊರತೆ ಇರುವುದರಿಂದ ಸದನವನ್ನು ಇನ್ನೂ ಒಂದು ವಾರ ಕಾಲ ವಿಸ್ತರಣೆ ಮಾಡುವಂತೆ ಪತ್ರ ಬರೆದು ಮನವಿ ಮಾಡಿದ್ದೆ. ಈ ಮನವಿಯನ್ನು ಅವರ ಒಪ್ಪದ ಕಾರಣಕ್ಕೆ, ಎಂಇಎಸ್ ಪುಂಡಾಟಿಕೆ, ನಿಲುವಳಿ ಸೂಚನೆಯನ್ನು ತಿರಸ್ಕರಿಸಿರುವ ಕಾರಣಕ್ಕೆ ನಾವಿಂದು ಸಭಾತ್ಯಾಗ ಮಾಡಿದ್ದೇವೆ. ಅಧಿವೇಶನದ ಹೊರಗೆ ಈ ಎಲ್ಲಾ ವಿಚಾರಗಳ ಬಗ್ಗೆ ಪ್ರತಿಭಟನೆ ಮುಂದುವರೆಸುತ್ತೇವೆ ಮತ್ತು ಜನತಾ ನ್ಯಾಯಾಲಯಕ್ಕೆ ಇವನ್ನು ತೆಗೆದುಕೊಂಡು ಹೋಗುತ್ತೇವೆ ಎಂದರು.

ಕಳಂಕ ಹೊತ್ತಿರುವ ವ್ಯಕ್ತಿಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಅವರನ್ನು ಉಳಿಸಿಕೊಂಡರೆ ಸರ್ಕಾರ ಮುಂದುವರೆಯಲು ಯಾವುದೇ ನೈತಿಕ ಹಕ್ಕುಗಳು ಇರುವುದಿಲ್ಲ. ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕಾಯ್ದೆ ಮಂಡನೆಗೆ ಮುಂದಾದರೆ ಅದರ ಪೀಠಿಕೆಗೆ ನಮ್ಮ ವಿರೋಧ ಇದೆ. ಚರ್ಚೆಯಲ್ಲಿ ಭಾಗವಹಿಸುವುದು ಬೇರೆ ಮಾತು.

ಬೆಳಗಾವಿಯಲ್ಲಿ ಪುಂಡರು ನಡೆಸಿರುವ ಕುಕೃತ್ಯದ ಹಿಂದೆ ಕಾಂಗ್ರೆಸ್ ಇದೆ ಎಂಬ ಸಿ.ಟಿ. ರವಿ ಹೇಳಿಕೆ ಶುದ್ಧ ಸುಳ್ಳು ಮತ್ತು ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಅವರು ಇದೇ ರೀತಿ ಕ್ಷುಲ್ಲಕ ಹೇಳಿಕೆ ನೀಡಿದರೆ ನಾವು ಕೂಡ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರೇ ಗಲಾಟೆ ಎಬ್ಬಿಸುತ್ತಿದ್ದಾರೆಂದು ಆರೋಪ ಮಾಡಬೇಕಾಗುತ್ತದೆ. ಸಿ.ಟಿ ರವಿ ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳಿತು. ಆರೋಪ ಮಾಡಲು ನಮಗೂ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+