ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ 27 ಆರೋಪಿಗಳ ಬಂಧನ
ಬೆಳಗಾವಿ, ಡಿಸೆಂಬರ್ 18: ಬೆಳಗಾವಿ ನಗರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ನಂತರ 27 ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಪೊಲೀಸರ ಸುಮಾರು 26 ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದರು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್ ತಿಳಿಸಿದ್ದಾರೆ.
ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಶುಕ್ರವಾರ ತಡರಾತ್ರಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಕಿಡಿಗೇಡಿಗಳು ಹಾನಿಗೊಳಿಸಿ ದುಷ್ಕೃತ್ಯ ಮೆರೆದಿದ್ದರು. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದು, ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
ಬೆಳಗಾವಿಯಲ್ಲಿ ಕೆಲವು ಕಿಡಿಗೇಡಿಗಳು ಮಾಡಿರುವ ಗಲಾಟೆ ವಿಚಾರ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಪ್ರಾತಸ್ಮರಣೀಯ ವೀರನಾದ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರುಗಳು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತ ಭಾರತೀಯ ಪುತ್ರರು ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇಬ್ಬರು ವೀರರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಭಾಷಾ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವ ಘಟನೆ ಅಕ್ಷಮ್ಯ ಅಪರಾಧವಾಗಿದೆ. ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಹಾಗೂ ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು ವಿನಂತಿಸಿದ್ದಾರೆ.
ಗೋವಿಂದ ಕಾರಜೋಳ ಖಂಡನೆ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿಕೃತಗೊಳಿಸಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು, ಈ ಘಟನೆ ಖಂಡನಾರ್ಹವಾಗಿದೆ.

ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡವರು. ಬ್ರಿಟಿಷರ ವಿರುದ್ಧ ಕಾದಾಡಿ ನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದವರು. ದೇಶಭಕ್ತನಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾಡಿನ ಜನತೆ ಶಾಂತಿ ಕಾಪಾಡಲು ವಿನಂತಿಸುತ್ತೇನೆ ಎಂದು ಮಾನ್ಯ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.












Click it and Unblock the Notifications