ಜನ ಬೆನ್ನ ಹಿಂದೆ ಇರುವವರೆಗೂ ನಾನು ಹೀರೋನೇ ಎಂದ ರಮೇಶ್ ಜಾರಕಿಹೊಳಿ
ಗೋಕಾಕ, ಸೆಪ್ಟೆಂಬರ್ 23: "ಸತೀಶ ಜಾರಕಿಹೊಳಿ ಬಹಳಷ್ಟು ಜನರಿಗೆ ಅನ್ಯಾಯ ಮಾಡಿದ್ದಾರೆ. ಅದನ್ನು ನಾನೇನಾದರೂ ಬಹಿರಂಗಪಡಿಸಿದರೆ ಜಾರಕಿಹೊಳಿ ಮನೆತನದ ಮರ್ಯಾದೆ ಹೋಗುತ್ತದೆ" ಎಂದಿದ್ದಾರೆ ಬೆಳಗಾವಿ ಜಿಲ್ಲೆಯ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ.
ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಒಂದು ವಸ್ತು ಕಳೆದುಕೊಂಡಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಪದೇ ಪದೆ ಹೇಳುತ್ತಿದ್ದಾರೆ. ಆ ವಸ್ತು ಯಾವುದು ಎಂದು ಬಹಿರಂಗಪಡಿಸಲಿ. ಸತೀಶ ಅದೆಲ್ಲಿ ಬಂದು ಹೇಳುತ್ತಾನೆ ನಾನು ನೋಡುತ್ತೇನೆ. ಅದೇ ವೇದಿಕೆಯಲ್ಲಿ ನಾನ್ಯಾರು ಎಂದು ತೋರಿಸುತ್ತೇನೆ" ಎಂದು ಸವಾಲು ಹಾಕಿದ್ದಾರೆ.

"ಸುಪ್ರೀಂ ಕೋರ್ಟ್‌ನಲ್ಲಿ ಜಯ ನಮ್ಮದೇ. ನಮ್ಮ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ. ಆದರೆ ಪಕ್ಷ ಯಾವುದು ಎಂದು ನಿರ್ಧರಿಸಿಲ್ಲ. ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಇರೋವರೆಗೂ ನಾನು ಹೀರೋ. ಕ್ಷೇತ್ರದ ಜನ ಕೈಬಿಟ್ಟ ದಿನ ನಾನು ಜೀರೋ. ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾನು ನಾಮಪತ್ರ ಸಲ್ಲಿಸಿ ಎಲ್ಲಿ ಕುಳಿತರೂ ನನ್ನ ಗೆಲ್ಲಿಸುವ ಶಕ್ತಿ ನಮ್ಮ ಜನರಿಗಿದೆ. ಗೋಕಾಕ ಸಾಮ್ರಾಜ್ಯ ಕಟ್ಟಿದ್ದು ನನ್ನ ತಂದೆ ಲಕ್ಷ್ಮಣರಾವ್ ಜಾರಕಿಹೊಳಿ. ಸತೀಶ ಜಾರಕಿಹೊಳಿ ಮತದಾರರಿಗೆ ಟೋಪಿ ಹಾಕಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಇಲ್ಲಿ ಗೆಲ್ಲುವುದು ನಾನೇ" ಎಂದು ಹೇಳಿದರು.












Click it and Unblock the Notifications