ಮುರಿದುಬಿದ್ದ ಮಾತುಕತೆ : ವೈದ್ಯರಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು, ನವೆಂಬರ್ 14 : ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸರ್ಕಾರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ಮಂಗಳವಾರದಿಂದ ವೈದ್ಯರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಸದನದಲ್ಲಿ ಮಂಡಿಸಬಾರದು ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಸೋಮವಾರ ಬೆಳಗ್ಗೆಯಿಂದ ಬೆಳಗಾವಿಯ ಸುವರ್ಣವಿಧಾನಸೌಧದ ಮುಂದೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

'ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆ ಬಗ್ಗೆ ಭಯ ಬೇಡ ವೈದ್ಯರಿಗೆ ತೊಂದರೆ ಅಥವ ಕಿರುಕುಳ ನೀಡುವ ಮಸೂದೆ ರೂಪಿಸಿಲ್ಲ. ಮಸೂದೆ ಮಂಡನೆ ಮಾಡುವ ಮೊದಲು ಆರೋಗ್ಯ ಸಚಿವರು ಮತ್ತು ಐಎಂಎ ಪದಾಧಿಕಾರಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ' ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೇ ಮಸೂದೆ ವಿಚಾರದಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಕೆಲವು ಶಾಸಕರು, ಸಚಿವರು ಸಿದ್ದರಾಮಯ್ಯ ಅವರ ಮೇಲೆ ಮಸೂದೆ ಮಂಡನೆ ಮಾಡಬಾರದು ಎಂದು ಒತ್ತಡ ಹಾಕುತ್ತಿದ್ದರೆ. ಕೆಲವು ಸಚಿವರು ಮಸೂದೆ ಪರವಾಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಸೂದೆ ಪರವಾಗಿದ್ದಾರೆ. ವೈದ್ಯರ ಒತ್ತಾಯಕ್ಕೆ ಮಣಿದು ಸದನದಲ್ಲಿ ಮಸೂದೆ ಮಂಡನೆ ಮಾಡದಿರುವ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಮಸೂದೆಯಲ್ಲಿ ಏನಿದೆ?
* ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ವಿಧಿಸುವಂತಿಲ್ಲ
* ಹೆಚ್ಚು ಬಿಲ್ ಮಾಡಿದರೆ 25 ರಿಂದ 5 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ
* ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳಿನಿಂದ 3 ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು
* ದೇಹ ಹಸ್ತಾಂತರ ಮಾಡುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ
* ವೈದ್ಯಕೀಯ ಸಂಸ್ಥೆಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ
ಮುಂತಾದ ಅಂಶಗಳನ್ನು ಮಸೂದೆ ಒಳಗೊಂಡಿದೆ.












Click it and Unblock the Notifications