ಕಿತ್ತೂರು ಉತ್ಸವದಲ್ಲಿ ಖಾಸಗಿ ಬೌನ್ಸರ್‌ಗಳ ದರ್ಬಾರ್: ಜನ ಹೈರಾಣು
ಬೆಳಗಾವಿ, ಅಕ್ಟೋಬರ್ 24: ಉತ್ತರ ಕರ್ನಾಟಕದ ಹೆಮ್ಮೆಯ ಕಿತ್ತೂರು ಉತ್ಸವದಲ್ಲಿ ಸಮರ್ಥವಾಗಿ ಜಿಲ್ಲಾ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಖಾಸಗಿ ಬೌನ್ಸರ್ ಗಳ ನಿಯೋಜನೆ ಮಾಡಿರುವುದು ಕಿತ್ತೂರು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಐತಿಹಾಸಿಕ ಕಿತ್ತೂರಿನ 200ನೇ ವರ್ಷದ ಉತ್ಸವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಇದ್ದರೂ, ಹೆಚ್ಚುವರಿ ಖಾಸಗಿ ಬೌನ್ಸರ್ ನಿಯೋಜನೆ ಮಾಡಿದ್ದು ಕಿತ್ತೂರು ತಾಲೂಕಿನ ಜನರ ಕಿರಿಕಿರಿಗೆ ಕಾರಣವಾಗಿದೆ. ಬೌನ್ಸರ್ ತಂಡಗಳ ಅತಿಯಾದ ವರ್ತನೆಯಿಂದ ಜನ ಉತ್ಸವವನ್ನು ಸಂಭ್ರಮಿಸಲು ಅಡ್ಡಿಯಾಗುತ್ತಿದ್ದು, ಕೆಲವರು ಅರ್ಧದಿಂದಲೇ ಉತ್ಸವದಿಂದ ಮರಳುತ್ತಿದ್ದಾರೆ ಎನ್ನಲಾಗಿದೆ.

ಕಿತ್ತೂರು ಉತ್ಸವಕ್ಕೆ 9 ಡಿವೈಎಸ್ಪಿ, 26 ಸಿಪಿಐ, 56. ಎಎಸ್ಐ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಆದರೆ ಕಿತ್ತೂರು ಉತ್ಸವದ ಖರ್ಚು ವೆಚ್ಚ ತೋರಿಸಲು ಖಾಸಗಿ ಬಾನ್ಸರ್‌ಗಳನ್ನು ನೇಮಕ ಮಾಡಿರುವುದು ಕಿತ್ತೂರು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಕಿತ್ತೂರು ಉತ್ಸವಕ್ಕೆ ಬರುವ ಜನರಿಗೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ ಖಾಸಗಿ ಬೌನ್ಸರ್‌ಗಳು ಸಾರ್ವಜನಿಕರೊಂದಿಗೆ ಕೆಟ್ಟ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಜೋರಾಗಿದೆ. ಇಲ್ಲಿಯವರೆಗೆ ನಡೆದ ಕಿತ್ತೂರು ಉತ್ಸವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಮರ್ಥವಾಗಿ ಮಾಡಿಕೊಂಡು ಬಂದಿದೆ.

ಆದರೆ 200ನೇ ವರ್ಷದ ಕಿತ್ತೂರು ಉತ್ಸವದಲ್ಲಿ ಪೊಲೀಸರಿಗಿಂತ ಖಾಸಗಿ ಬಾನ್ಸರ್‌ಗಳೇ ಹೆಚ್ಚಾಗಿ ಕಂಡು ಬಂದಿದ್ದು ಪೊಲೀಸ್ ಇಲಾಖೆಯ ಮೇಲೆಯೇ ಕಿತ್ತೂರಿನ ಜನ ಅನುಮಾನ ಪಡುತ್ತಿದ್ದಾರೆ. ಉಳಿದ ಎರಡು ದಿನದ ಉತ್ಸವದಲ್ಲಿ ಈ ಬೌನ್ಸರ್ ಗಳನ್ನು ತೆಗೆದು ಹಾಕಿ ಪೊಲೀಸರೇ ಭದ್ರತೆ ನೀಡಿದರೆ ಸಾಕು ಎನ್ನುವ ಮಾತು ಕಿತ್ತೂರು ಜನರ ಒತ್ತಾಯವಾಗಿದೆ.
ವೀರ ರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ 200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವ-2024ಕ್ಕೆ ಈಗಾಗಲೇ ಅದ್ಧೂರಿ ಚಾಲನೆ ನೀಡಲಾಗಿದೆ. ಕಿತ್ತೂರಿನ ಜನ ಬಹುದಿನದಿಂದ ಕಾದಿದ್ದ ಬೃಹತ್ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಕಿತ್ತೂರು ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಇತರ ಕಡೆಗಳಿಂದ ಜನ ತಂಡೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಕಿತ್ತೂರು ಉತ್ಸವನ್ನು ಸಂಭ್ರಮಿಸಲು ಬಂದ ಜನಕ್ಕೆ ಖಾಸಗಿ ಬೌನ್ಸರ್‌ಗಳ ಕಾಟ ಹೆಚ್ಚಾಗಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು ಎನ್ನುವ ಆಗ್ರಹ ಜೋರಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕಾಗಿದೆ.












Click it and Unblock the Notifications