ಬೆಳಗಾವಿಯಲ್ಲಿ ರಾತ್ರೋರಾತ್ರಿ ಮನೆ ಖಾಲಿ ಮಾಡಿದ ಜನ
ಬೆಳಗಾವಿ, ಏಪ್ರಿಲ್ 20: ಕೊರೊನಾ ವೈರಸ್ ನ ಭಯಕ್ಕೆ ರಾತ್ರೋರಾತ್ರಿ ಜನರು ಮನೆಗಳನ್ನು ಖಾಲಿ ಮಾಡುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ಚಿಂಚಲಿ ಪಟ್ಟಣದಲ್ಲಿ ಕಂಡುಬಂದಿದೆ.
ಕೊರೊನಾ ವೈರಸ್ ಶಂಕಿತರನ್ನು ಹೋಮ್ ಕ್ವಾರಂಟೈನ್ ಮಾಡಿದ್ದರಿಂದ, ಅಕ್ಕಪಕ್ಕದ ಜನರು ಮನೆಗಳ ಖಾಲಿ ಮಾಡುತ್ತಿದ್ದಾರೆ. ಚಿಂಚಲಿ ಪಟ್ಟಣದ ಭಕ್ತಿ ನಿವಾಸದಲ್ಲಿ 44 ಜನರನ್ನು ಕ್ವಾರಂಟೈನ್ ಹಿನ್ನೆಲೆಯಲ್ಲಿ, ಮಾಯಕ್ಕಾ ದೇವಸ್ಥಾನದ ಭಕ್ತಿನಿವಾಸದ ಸುತ್ತಲೂ ಇರುವ 40 ಕ್ಕೂ ಹೆಚ್ಚು ಕುಟುಂಬಗಳ ಮನೆ ಖಾಲಿ ಮಾಡಿದ್ದಾರೆ.
ಕುಡಚಿ ಪಟ್ಟಣದ ಜನರು ಸೇರಿದಂತೆ ಬೇರೆ ರಾಜ್ಯದ 44 ಜನರನ್ನು ಪಕ್ಕದ ಚಿಂಚಲಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಹೋಮ್ ಕ್ವಾರಂಟೈನ್ ಮಾಡಿದೆ. ಎಲ್ಲಿ ನಮಗೇ ಕೊರೊನಾ ವೈರಸ್ ಬಂದು ಬಿಡುತ್ತದೆ ಎಂಬ ಆತಂಕದಲ್ಲಿ ಜನರು ರಾತ್ರೋರಾತ್ರಿ ಮನೆಗಳನ್ನು ಖಾಲಿ ಮಾಡಿದ್ದಾರೆ.

ಚಿಂಚಲಿ ಪಟ್ಟಣದ ಮಧ್ಯಭಾಗದಲ್ಲಿ ಧರ್ಮಶಾಲೆ ಇದೆ. ಈ ಹಿಂದೆ ಶಂಕಿತರನ್ನು ಇಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.

ಸ್ಥಳೀಯ ಜನರ ವಿರೋಧದ ನಡುವೆಯೂ ಬೇರೆ ಊರಿನ ಜನರನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣಕ್ಕೆ ತಂದು ಕ್ವಾರಂಟೈನ್ ಮಾಡಲಾಗಿದೆ.












Click it and Unblock the Notifications