ESIC hospital: ಕೊನೆಗೂ ಬೆಳಗಾವಿಗೆ ಬರಲಿದೆ ಹೊಸ ಇಎಸ್‌ಐಸಿ ಆಸ್ಪತ್ರೆ
ಚಂಡೀಗಢದಲ್ಲಿ ನಡೆದ ಇಎಸ್‌ಐಸಿಯ 190ನೇ ಸಭೆಯಲ್ಲಿ ಏಳು ರಾಜ್ಯಗಳಲ್ಲಿ ಇಎಸ್‌ಐಸಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಬೆಳಗಾವಿ, ಫೆಬ್ರವರಿ. 20: ಕೇಂದ್ರ ಸರ್ಕಾರ ಬೆಳಗಾವಿಗೆ ಹೊಸ ಇಎಸ್‌ಐಸಿ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಕಾರ್ಮಿಕರ ಹಲವು ವರ್ಷಗಳ ಬೇಡಿಕೆ ಜಾರಿಯಾಗುತ್ತಿದೆ.
The 190th Meeting of ESI Corporation concluded today in Chandigarh. The meeting ended with some important decisions on ensuring strengthening social security for India’s Shram Jeevis, furthering PM Shri @narendramodi ji’s vision. pic.twitter.com/5rTuMi5RSJ
— Bhupender Yadav (@byadavbjp) February 20, 2023
ನೌಕರರ ರಾಜ್ಯ ವಿಮಾ ನಿಗಮವು ರಾಜ್ಯದ ಬೆಳಗಾವಿ ಸೇರಿದಂತೆ ಏಳು ರಾಜ್ಯಗಳ ಪಟ್ಟಣಗಳು ಮತ್ತು ನಗರಗಳಲ್ಲಿ ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಿದೆ. ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಬೆಳಗಾವಿ ಸೇರಿ, ತೆಲಂಗಾಣದ ಶಂಶಾಬಾದ್, ಮಹಾರಾಷ್ಟ್ರದ ಬಾರಾಮತಿ, ರಾಜಸ್ಥಾನದ ಅಜ್ಮೀರ್ ಬಳಿಯ ಕಿಶನ್‌ಗಢ, ಒಡಿಶಾದ ಬಾಲಸೋರ್, ಆಂಧ್ರಪ್ರದೇಶದ ಕರ್ನೂಲ್ ಮತ್ತು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಪೂರ್ಣ ಪ್ರಮಾಣದ ಆಸ್ಪತ್ರೆಗಳು ಬರಲಿವೆ.

ಸೋಮವಾರ ಚಂಡೀಗಢದಲ್ಲಿ ನಡೆದ ಇಎಸ್‌ಐಸಿಯ 190ನೇ ಸಭೆಯಲ್ಲಿ ಏಳು ರಾಜ್ಯಗಳಲ್ಲಿ ಇಎಸ್‌ಐಸಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.
ಈ ಸಭೆಯಲ್ಲಿ ದೇಶದ ಭಾರತದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಕುರಿತು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭೂಪೇಂದ್ರ ಯಾದವ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ನಗರದಲ್ಲಿ ಬಹುತೇಕ ಕೈಗಾರಿಕೆಗಳು ಇರುವ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ವಿಧಾನಸಭಾ ಸದಸ್ಯ ಅಭಯ ಪಾಟೀಲ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ ಇಲ್ಲಿ 150 ಹಾಸಿಗೆಯ ಇಎಸ್‌ಐ ಆಸ್ಪತ್ರೆ ಇರಬೇಕಿತ್ತು. ಸದ್ಯ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮಾತ್ರ ಇದೆ. ಅದೂ ಸಂಪೂರ್ಣ ಶಿಥಿಲಗೊಂಡಿದೆ. ಈಗ ಹೊಸ ಆಸ್ಪತ್ರೆ ಘೋಷಣೆ ಮಾಡಿರುವುದು ಕಾರ್ಮಿಕರಲ್ಲಿ ಸಂತಸ ಮೂಡಿಸಿದೆ.
ಇತ್ತೀಚೆಗೆ ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾರ್ಮಿಕರಿಗೆ ಕೈಗೆಟಕುವ ಬೆಲೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹುಬ್ಬಳ್ಳಿ ಮತ್ತು ದಾವಣಗೆರೆಯ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು 50 ರಿಂದ 100ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು, ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿನ ಸಾವಗಾವ್, ಜಿಲ್ಲಾ ಕ್ರೀಡಾಂಗಣ, ಮಾಲಿನಿ ಗಾರ್ಡನ್, ಸಿಪಿಎಡ್ ಮೈದಾನ ಭದ್ರತಾ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬಳಿಕ ಸಮಾವೇಶದ ಸ್ಥಳ ಅಧಿಕೃತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications