Monsoon Rain Effect: ತುಂಬಿ ಹರಿದ ಹಳ್ಳ-ಶಾಲಾ ಮಕ್ಕಳಿಗೆ ಪ್ರಾಣಸಂಕಟ
Monsoon Rain Effect: ಕುಂದಾನಗರಿ ಬೆಳಗಾವಿ ಜಿಲ್ಲೆಯ ಹಲವೆಡೆ ಅಬ್ಬರದ ಮಳೆಯಾಗುತ್ತಿರುವ ಹಿನ್ನೆಲೆ ನದಿ, ಹಳ್ಳ, ಕೆರೆಗಳು ಉಕ್ಕಿಹರಿದಿವೆ. ಪರಿಣಾಮ ಇದರಿಂದ ದೊಡ್ಡ ದೊಡ್ಡ ಅನಾಹುತಗಳೇ ಸೃಷ್ಟಿಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮುಂಗಾರು ಚುರುಕು ಪಡೆದ ಹಿನ್ನೆಲೆ ಹಳ್ಳ ತುಂಬಿ ಹರಿದಿದ್ದು, ಇದರಿಂದ ಶಾಲಾ ಮಕ್ಕಳು ಹಳ್ಳದ ಸೇತುವೆ ದಾಟಲು ಆಗದಂತಹ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉಡಚಮ್ಮ ನಗರದಲ್ಲಿ ನಡೆದಿದೆ.

ಉಡಚ್ಚಮ್ಮ ನಗರದ ಸರ್ಕಾರಿ ಕನ್ನಡ ಶಾಲೆಗೆ ವಿದ್ಯಾರ್ಥಿಗಳು ಇದೇ ಹಳ್ಳವನ್ನೇ ದಾಟಿಕೊಂಡು ಹೋಗಬೇಕಿದೆ. ಆದ್ದರಿಂದ ಬೇರೆ ಯಾವುದೇ ಪರ್ಯಾಯ ದಾರಿಯಿಲ್ಲದೆ, ಶಾಲಾ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹಳ್ಳವನ್ನು ದಾಟಿ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕೆಲವು ಪೋಷಕರು ತಮ್ಮ ಮಕ್ಕಳನ್ನು ಹಳ್ಳ ದಾಟಿಸಲು ಹರಸಾಹಸಪಟ್ಟಿದ್ದಾರೆ.
20ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಓಡಾಡುವ ಮಾರ್ಗ ಇದೊಂದೇ ಇರೋದು.
ಪ್ರತಿ ವರ್ಷ ಮಳೆಯಿಂದ ಈ ಮಾರ್ಗದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೆ, ಶಾಲಾ ಮಕ್ಕಳು, ಜನರ ಹಿತದೃಷ್ಟಿಯಿಂದ ಹಳ್ಳದ ಮೇಲೆ ಮೇಲ್ಸುತೇವೆ ನಿರ್ಮಾಣ ಮಾಡಬೇಕು ಎಂದು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ ಜನಪ್ರತಿನಿಧಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಹಲವೆಡೆ ತಂಪೆರೆದ ಮಳೆರಾಯ: ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದಿದ್ದು, ಇದರಿಂದ ಅನ್ನದಾತರು ಸಂತಸಗೊಂಡಿದ್ದರೆ, ಮತ್ತೊಂದೆಡೆ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿ ಭೀತಿ ಹುಟ್ಟಿಸಿದ್ದಾನೆ. ಹಾಗೆಯೇ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆಯಿಂದ ಅನಾಹುತಗಳು ಸೃಷ್ಟಿಯಾಗಿವೆ.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರದಲ್ಲಿ ನಿನ್ನೆ ಮತ್ತು ಇಂದು ಧಾರಾಕಾರ ಮಳೆ ಸುರಿದಿದ್ದು, ಇದರಿಂದಾಗಿ ವಿದ್ಯಾರ್ಥಿಗಳು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎವಿಕೆ ರಸ್ತೆ ಸೇರಿದಂತೆ ಹಲವೆಡೆ ನೀರು ನಿಂತಿದ್ದು, ಜನರಿಗೆ ತೊಂದರೆ ಆಯಿತು. ಮಧ್ಯಾಹ್ನ ಶುರುವಾದ ಮಳೆಯು ಸುಮಾರು ಒಂದೂವರೆ ಗಂಟೆಗಳ ಕಾಳ ಸುರಿಯಿತು. ಇನ್ನು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಸಿಟಿ ಮಂದಿಗೆ ಕೂಲ್ ಕೂಲ್ ವಾತಾವರಣ ಇತ್ತು. ಗ್ರಾಮೀಣ ಪ್ರದೇಶದಲ್ಲಿಯೂ ವರುಣ ಆರ್ಭಟಿಸಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಸುಮಾರು ಒಂದೂವರೆ ಗಂಟೆಗಳ ಕಾಲ ಧಾರಾಕಾರ ಸುರಿಯಿತಲ್ಲದೇ, ಶಾಲೆ ಬಿಡುವ ವೇಳೆಯಲ್ಲಿ ಮಳೆ ಬಂದಿದ್ದರಿಂದ ವಿದ್ಯಾರ್ಥಿಗಳು ಮಳೆಯಲ್ಲಿ ತೊಯ್ದುಕೊಂಡು ಮನೆಗೆ ಹೋಗುವಂತಾಯಿತು. ಕೆಲ ಬಡಾವಣೆಗಳಲ್ಲಿ ನೀರು ನಿಂತು ಜನರು ಪರದಾಡಿದ ಘಟನೆಗಳು ನಡೆದಿವೆ.
ಕಳೆದ ಒಂದು ವಾರ ಬಿಡುವು ನೀಡಿದ್ದ ವರುಣ ಮತ್ತೆ ಆರ್ಭಟಿಸಿದ್ದು, ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗಿದ್ದಾರೆ. ಜಗಳೂರು ತಾಲೂಕಿನ ಹಲವೆಡೆಯೂ ಮಳೆಯಾಗಿದ್ದು, ಬಿಳಿಚೋಡು ಹೋಬಳಿ ವ್ಯಾಪ್ತಿಯ ಪಲ್ಲಾಗಟ್ಟೆ, ಸೊಕ್ಕೆ ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಳೆರಾಯ ಆರ್ಭಟಿಸಿದ್ದಾರೆ.












Click it and Unblock the Notifications