ಮುಂಗಾರು; ಬೆಳಗಾವಿಯಲ್ಲಿ ನದಿಗಳ ನೀರಿನ ಮಟ್ಟದ ಮೇಲೆ ಕಣ್ಗಾವಲು
ಬೆಳಗಾವಿ, ಜೂನ್ 01; ನೈಋತ್ಯ ಮುಂಗಾರು ಮಳೆ ಆರಂಭವಾಗುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಎಲ್ಲ ನದಿಯ ಒಳಹರಿವು ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಳೆಗಾಲ ಸಮೀಪಿಸುತ್ತಿರುವ ಕಾರಣ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳಿಗೆ ಪ್ರತಿ ತಾಲ್ಲೂಕಿನಲ್ಲಿ ವಿಪತ್ತು ನಿರ್ವಹಣಾ ಸಭೆಯನ್ನು ನಡೆಸಿ ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ನಿರ್ವಹಣೆಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಹಾಯಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ಅದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೂಡ ಜನರಿಗೆ ತುರ್ತು ನೆರವು ನೀಡಲು ಸಹಾಯವಾಗುವಂತೆ ಕಂಟ್ರೋಲ್ ರೂಂ ಆರಂಭಿಸಬೇಕು ಎಂದು ಸೂಚನೆ ಕೊಟ್ಟರು.
ಕಾಳಜಿ ಕೇಂದ್ರಗಳ ಸ್ಥಾಪನೆ; ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಎಲ್ಲ ನದಿಯ ಒಳಹರಿವು ಮೇಲೆ ನಿರಂತರ ನಿಗಾ ವಹಿಸಬೇಕು. ತುರ್ತು ಸೇವೆಗೆ ಅಗತ್ಯವಿರುವ ಬೋಟ್, ಜೆಸಿಬಿ ಮತ್ತಿತರ ಉಪಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಮರಗಳು ಉರುಳಿ ಬಿದ್ದು ಪ್ರಾಣಹಾನಿ ಸಂಭವಿಸುತ್ತವೆ. ಆದ್ದರಿಂದ ರಸ್ತೆಬದಿಯ ಮರಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅಗತ್ಯವೆನಿಸಿದರೆ ಅರಣ್ಯ ಇಲಾಖೆಯ ಜತೆಗೂಡಿ ನಿಯಮಾನುಸಾರ ಟೊಂಗೆಗಳನ್ನು ಅಥವಾ ಮರವನ್ನು ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರ ಮತ್ತು ಶಾಲಾ ಕೊಠಡಿಗಳನ್ನು ಗುರುತಿಸಬೇಕು. ಅದೇ ರೀತಿ ಶಿಥಿಲಗೊಂಡ ಮನೆಗಳನ್ನು ಗುರುತಿಸಬೇಕು. ಸಾಧ್ಯವಾದರೆ ಮಳೆಗಾಲದಲ್ಲಿ ಸುರಕ್ಷಿತ ಜಾಗದಲ್ಲಿ ಇರುವಂತೆ ಮನವೊಲಿಸಬೇಕು. ಎನ್. ಡಿ. ಆರ್. ಎಫ್. ತಂಡ ಜಿಲ್ಲೆಗೆ ಆಗಮಿಸಲಿದ್ದು, ಕಳೆದ ಬಾರಿಯಂತೆ ನದಿತೀರದ ಗ್ರಾಮಗಳಲ್ಲಿ ಅವರು ಪರಿಶೀಲನೆ ನಡೆಸಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂದರು.

ಮಳೆಯ ಮುನ್ಸೂಚನೆ ಕುರಿತು ಪ್ರತಿಯೊಂದು ಗ್ರಾಮಗಳ ಜನರಿಗೆ ಮಾಹಿತಿಯನ್ನು ನೀಡಲು ಡಂಗುರ ಸಾರಬೇಕು. ಪ್ರವಾಹ ಸಂದರ್ಭದಲ್ಲಿ ಜನರನ್ನು ರಕ್ಷಿಸಿದ ಬಳಿಕ ಅವರಿಗೆ ಸೂಕ್ತ ವಸತಿ, ಊಟೋಪಹಾರ ಒದಗಿಸಲು ಅನುಕೂಲವಾಗುವಂತೆ ಕಾಳಜಿ ಕೇಂದ್ರ ಸ್ಥಾಪಿಸಬೇಕಾಗುತ್ತದೆ. ಆದ್ದರಿಂದ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ಕೊಟ್ಟರು.
ಕುಡಿಯುವ ನೀರಿನ ಕೊರತೆ ಕಂಡುಬಂದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಗಾರು ಮಳೆ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಸೂಚನೆ ಕೊಟ್ಟಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ, "ಮಳೆಗಾಲ ಆರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಎಲ್ಲ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಜತೆಗೂಡಿ ರೈತರಿಗೆ ಬೀಜ, ಗೊಬ್ಬರ ವಿತರಣೆ ಕಾರ್ಯವನ್ನು ಆರಂಭಿಸಬೇಕು. ಬಿತ್ತನೆ ಬೀಜ ಖರೀದಿಗೆ ರೈತರು ದೂರ ಅಲೆಯುವುದನ್ನು ತಪ್ಪಿಸಲು ಆದಷ್ಟು ಸಮೀಪದಲ್ಲಿ ಬೀಜ ಲಭಿಸುವಂತೆ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದ್ದಾರೆ.












Click it and Unblock the Notifications