ಬೆಳಗಾವಿಯಲ್ಲಿ ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ ಭೇಟಿ
ಬೆಳಗಾವಿ, ಡಿಸೆಂಬರ್ 22; ಮಾಜಿ ಸಚಿವ, ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡರು.
ಗುರುವಾರ ಅವರು ವಿಧಾನಭೆ ಕಲಾಪದಲ್ಲಿ ಭಾಗಿಯಾದರು. ಲಿಫ್ಟ್‌ನಲ್ಲಿ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ಮಾತುಕತೆ ನಡೆಸಿದರು. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಾಬೀತು ಮಾಡಿದರು.

ಭೋಜನ ವಿರಾಮಕ್ಕಾಗಿ ಕಲಾಪ ಮುಂದೂಡಿದಾಗ ಸಿದ್ದರಾಮಯ್ಯ, ಈಶ್ವರಪ್ಪ ಭೇಟಿ ಮಾಡಿದರು. ಲಿಫ್ಟ್‌ನಲ್ಲಿ ಉಭಯ ನಾಯಕರು ಒಟ್ಟಾಗಿ ಸಾಗಿದರು. ಪರಿಷತ್ ಸದಸ್ಯರು ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.

ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಉಭಯ ನಾಯಕರ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
ಕಲಾಪಕ್ಕೆ ಗೈರಾಗಿದ್ದ ಈಶ್ವರಪ್ಪ; ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಮಾಜಿ ಸಚಿವ, ಶಿವಮೊಗ್ಗ ನಗರದ ಬಿಜೆಪಿ ಶಾಸಕ ಕೆ. ಎಸ್. ಈಶ್ವರಪ್ಪ ಮೂರು ದಿನದಿಂದ ಕಲಾಪಕ್ಕೆ ಗೈರಾಗಿದ್ದರು.
ಸೋಮವಾರ ಬೆಳಗಾವಿಗೆ ಈಶ್ವರಪ್ಪ ತೆರಳಿದ್ದರು. ಆದರೆ ಕಲಾಪಕ್ಕೆ ಹಾಜರಾಗದೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ, ಮೂರು ದಿನ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಾಜರಾತಿಯಿಂದ ವಿನಾಯಿತಿ ನೀಡಿ ಎಂದು ಮನವಿ ಮಾಡಿದ್ದರು.
ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. "ನನಗೆ ಸಚಿವ ಆಗಬೇಕು ಅಂತ ಆಸೆ ಅಲ್ಲ. ಆಪಾದನೆ ಬಂದಿತ್ತು, ಅದರಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನ ವಾಪಸ್ ಸಚಿವ ಮಾಡುತ್ತೀನಿ ಎಂದು ಯಡಿಯೂರಪ್ಪ, ಮುಖ್ಯಮಂತ್ರಿಗಳು ಹಾಗೂ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಈಗ ಅದ್ದಕ್ಕಾಗಿ ಕೇಳುತ್ತಿದ್ದೇನೆ" ಎಂದು ಹೇಳಿದ್ದರು.
"ಕ್ಲೀನ್‌ಚಿಟ್ ಬಂದು 4 ತಿಂಗಳಾಯಿತು. ನಾನು ಯಾವುದೇ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿಲ್ಲ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಬೆಳಗಾವಿಗೆ ಹೋಗಿ ಸೌಮ್ಯ ಸ್ವಭಾವದ ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ" ಎಂದು ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
"ಮುಖ್ಯಮಂತ್ರಿಗಳು ರಾಷ್ಟ್ರೀಯ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪಗೆ ಕ್ಲೀನ್‌ಚಿಟ್ ಇರುವುದರಿಂದ ಅವರಿಗೆ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದಷ್ಟು ಬೇಗ ನಮ್ಮನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಿ ಎಂದು ಆಶಿಸುತ್ತೇನೆ" ಎಂದು ಈಶ್ವರಪ್ಪ ವಿವರಣೆ ನೀಡಿದ್ದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದರು. ಈ ಕುರಿತು ಮಾತನಾಡಿದ ಅವರು, "ಯಾರಿಗೂ ಮುಜುಗರ ಆಗದಂತೆ ಎಚ್ಚರ ವಹಿಸಿದ್ದೇನೆ. ರಾಜ್ಯದ ಪಕ್ಷಕ್ಕೂ ನನ್ನ ನಡೆ ಮುಜುಗರ ಆಗದಂತೆ ಎಚ್ಚರ ವಹಿಸಿದ್ದೇನೆ. ಇಡೀ ರಾಜ್ಯದಿಂದ ನನಗೆ ಫೋನ್‌ಗಳು ಬರುತ್ತಿವೆ. ನೀವು ಪಕ್ಷವನ್ನು ಕಟ್ಟುವುದಕ್ಕೆ ತುಂಬಾ ಕೆಲಸ ಮಾಡಿದ್ದೀರಾ. ನಿಮಗೆ ಯಾಕೆ ಹೀಗೆ ಅಂತ ಕೇಳಿದ್ದಾರೆ. ನನ್ನನ್ನೂ ಸೇರಿ ಅನೇಕರು ಮಾಡಿದ ಪ್ರಯತ್ನವೇ ಇವತ್ತಿನ ಬಿಜೆಪಿಗೆ ಕಾರಣ" ಎಂದು ಹೇಳಿದ್ದರು.
ಬೆಳಗಾವಿಗೆ ಭೇಟಿ; ಬುಧವಾರ ಸಂಜೆ ಕೆ. ಎಸ್. ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಸಂಜೆ ಬೆಳಗಾವಿಯ ವಿಟಿಯು ಗೆಸ್ಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವಾರದಲ್ಲಿ ಸಚಿವ ಸಂಪುಟಕ್ಕೆ ವಿಸ್ತರಣೆ ಬಗ್ಗೆ ಭರವಸೆ ನೀಡಿದ್ದಾರೆ. ಸೋಮವಾರ ಬಳಿಕ ಮುಖ್ಯಮಂತ್ರಿಗಳು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ತೆರಳುವ ನಿರೀಕ್ಷೆ ಇದೆ.












Click it and Unblock the Notifications