ಹೊಸ ಕಾರು ಖರೀದಿಸಿದ ಜಾರಕಿಹೊಳಿ: ಕಾರಿನ ಪ್ರಥಮ ಪೂಜೆ ಸ್ಮಶಾನದಲ್ಲಿ, ನಂಬರ್ KA-49-M-2023
ಬೆಳಗಾವಿ, ಜುಲೈ 13: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಕಾರನ್ನು ಖರೀದಿಸಿದ್ದಾರೆ. ಉಳ್ಳವರು ಕಾರು ತೆಗೆದುಕೊಳ್ಳುವುದು ಹೊಸ ವಿಷಯವಲ್ಲ, ಆದರೆ, ವಾಹನಕ್ಕೆ ಮೊದಲ ಪೂಜೆ ಸಲ್ಲಿಸಿದ್ದು ನಗರದ ಹಿಂದೂ ರುದ್ರಭೂಮಿಯೊಂದರಲ್ಲಿ.
ಮೌಢ್ಯದ ವಿರುದ್ದ ಸದಾ ಹೊಸಹೊಸ ಆಂದೋಲನ ಮಾಡುವ ಜಾರಕಿಹೊಳಿ, ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹೋಮ ಹವನದಲ್ಲೂ ಗೈರಾಗಿದ್ದರು. ಪೂರ್ವ ನಿಗದಿತ ಕಾರ್ಯಕ್ರಮವಿತ್ತು ಎಂದು ಸತೀಶ್ ಹೇಳಿಕೆಯನ್ನು ನೀಡಿದ್ದರು.
ಖರೀದಿಸಿದ ಹೊಸ ಕಾರಿಗೆ ಪಡೆದುಕೊಂಡ ನೊಂದಾಣಿ ಸಂಖ್ಯೆ 2023, ಸತೀಶ್ ಜಾರಕಿಹೊಳಿ ಈ ನಂಬರ್ ಪಡೆದುಕೊಂಡಿರುವುದರ ಹಿಂದೆ, ಅವರ ಮುಂದಾಲೋಚನೆಯೂ, ಮಹತ್ವಾಕಾಂಕ್ಷೆಯೂ ಎರಡೂ ಇದೆ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವ 'ಗೋಲ್' ಅನ್ನು ಇಟ್ಟುಕೊಳ್ಳಲು ಈ ನಂಬರ್ ಪಡೆದುಕೊಂಡಿದ್ದಾರಂತೆ.

ಗ್ರಹಣದ ವೇಳೆ ಸ್ಮಶಾನದಲ್ಲಿ ಊಟ ಮಾಡುವುದು, ಮೌಢ್ಯದ ವಿರುದ್ದ ಜನಾದೋಂಲನ ನಡೆಸುವುದು ಸತೀಶ್ ಜಾರಕಿಹೊಳಿಗೆ ಹೊಸದೇನಲ್ಲ. ಆದರೆ, ಹೊಸ ಕಾರಿನ ಪ್ರಥಮ ಪೂಜೆಯನ್ನು ರುದ್ರಭೂಮಿಯಲ್ಲಿ ಮಾಡುವ ಮೂಲಕ, ಜಾರಕಿಹೊಳಿ ಎಲ್ಲರ ಗಮನ ಸೆಳೆದಿದ್ದಾರೆ.
"ಕುಟುಂಬದಲ್ಲಿ ಎಲ್ಲರೂ ದೈವಭಕ್ತರು, ಎಲ್ಲರೂ ಪಂಚಾಂಗ ನೋಡುವವರೇ.. ನಾನು ಮಾತ್ರ ಪ್ರತ್ಯೇಕ. ಮೌಢ್ಯದ ವಿರುದ್ದದ ಹೋರಾಟಕ್ಕೆ ಆರಂಭದಲ್ಲಿ ಯಾರ ಬೆಂಬಲವೂ ಇರಲಿಲ್ಲ. ಈಗ, ಕೆಲವು ಪೀಠಾಧಿಪತಿಗಳು ನನಗೆ ಬೆಂಬಲ ಸೂಚಿಸುತ್ತಿದ್ದಾರೆ"ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ, ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಹೋಮ, ಹವನಾದಿಗಳು ನಡೆದಿತ್ತು. ಅದರಲ್ಲಿ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ಡಿಕೆಶಿ ಪರಮ ದೈವಭಕ್ತರಾಗಿದ್ದರೆ, ಸತೀಶ್ ಜಾರಕಿಹೊಳಿ ಭಿನ್ನ ನಿಲುವು, ಸಿದ್ದಾಂತವನ್ನು ಹೊಂದಿರುವವರು.












Click it and Unblock the Notifications