ಬೆಳಗಾವಿ: ತ್ರಿವರ್ಣ ಧ್ವಜದ ಜೊತೆ ಕೇಸರಿ ಧ್ವಜ ಹಾರಿಸಲು ಯತ್ನಿಸಿದ ಮರಾಠಿ ಪುಂಡರ ತಡೆದ ಪೊಲೀಸರು
ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮ ಮುಗಿಲು ಮುಟ್ಟಿದೆ, ಎಲ್ಲೆಲ್ಲೂ ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದು ದೇಶವಾಸಿಗಳಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದೆ. ಈ ಸಂದರ್ಭದಲ್ಲೂ ಹಲವು ಕಿಡಿಗೇಡಿಗಳು ರಾಜಕೀಯ ಮಾಡುವ ಹುನ್ನಾರ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲು ಯತ್ನಿಸಿದ್ದು ಅದನ್ನು ತಡೆಯುವಲ್ಲಿ ಕರ್ನಾಟಕ ಪೊಲೀಸರು ಸಫಲವಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಈ ಘಟನೆ ನಡೆದಿದೆ. ನಿಪ್ಪಾಣಿ ಪುರಸಭೆಯ ಕಟ್ಟಡದ ಮೇಲೆ ಇಬ್ಬರು ಕಾರ್ಪೊರೇಟರ್‌ಗಳು ತಮ್ಮ ಬೆಂಬಲಿಗರ ಜೊತೆ ತ್ರಿವರ್ಣ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲು ಪ್ರಯತ್ನಿಸಿದರು.
ಬಿಜೆಪಿ ಸ್ಥಳೀಯ ಶಾಸಕಿ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಜಿಲ್ಲಾಡಳಿತದಿಂದ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಬಳಿಕ ಈ ಘಟನೆ ನಡೆದಿದೆ. ಮರಾಠಿ ಭಾಷಿಕ ಪುರಸಭಾ ಸದಸ್ಯರು ಉದ್ದೇಶಪೂರ್ವಕವಾಗಿಯೇ ವಿವಾದ ಮಾಡಲು ಭಗವಾಧ್ವಜ ಹಾರಾಟಕ್ಕೆ ಯತ್ನಿಸಿದ್ದಾರೆ, ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡದೆ, ಪುರಸಭಾ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡು, ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ.
ಪೊಲೀಸರ ಪ್ರಕಾರ, ನಿಪ್ಪಾನಿ ಪುರಸಭೆಯ ಕಾರ್ಪೊರೇಟರ್‌ಗಳಾದ ವಿನಾಯಕ ವಾಡೆ ಮತ್ತು ಸಂಜಯ ಸಂಗಾವ್ಕರ್ ಅವರು ಕೇಸರಿ ಧ್ವಜಗಳೊಂದಿಗೆ ಬಂದು ಅದನ್ನು ಹಾರಿಸಲು ಪ್ರಯತ್ನಿಸಿದರು. ಕಾರ್ಪೊರೇಟರ್‌ಗಳು ಎನ್‌ಸಿಪಿ ಪಕ್ಷದ ಬೆಂಬಲಿತರು ಎಂದು ಹೇಳಲಾಗಿದೆ. ಪೊಲೀಸರು ಕಾರ್ಪೊರೇಟರ್‌ಗಳನ್ನು ತಡೆದು ವಾಪಸ್ ಕಳುಹಿಸಿದ್ದಾರೆ.












Click it and Unblock the Notifications