'ಬೆಳಗಾವಿ ಮಂತ್ರಿಗಳು, ಶಾಸಕರು ಬಾಯಿ ಹೊಲೆದುಕೊಂಡು ಕುಳಿತಿರುವುದೇಕೆ?'
ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೂಡ ರಣಕಹಳೆ ಮೊಳಗಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಯತ್ತ ತೆರಳಲು ಸಜ್ಜಾಗಿದೆ. ಇದೇ ವೇಳೆ ಬೆಳಗಾವಿ ಜಿಲ್ಲೆಯ ಶಾಸಕರು ಹಾಗೂ ಸಚಿವರ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕೆಂಡವಾಗಿದ್ದಾರೆ. ಸ್ವಂತ ಜಿಲ್ಲೆಯಲ್ಲೇ ಕನ್ನಡಿಗನ ಮೇಲಾದ ಶೋಷಣೆ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ ಏಕೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
"ನಾರಾಯಣಗೌಡರೇ ಬೆಳಗಾವಿಗೆ ಬನ್ನಿ, ಬಾಳೆಕುಂದ್ರಿಗೆ ಬನ್ನಿ, ಮರಾಠಿ ಬಾರದ ಕಾರಣಕ್ಕೆ, ಮರಾಠಿಯಲ್ಲಿ ಮಾತನಾಡದ ಕಾರಣಕ್ಕೆ ಅನ್ಯಾಯವಾಗಿ ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹದೇವಪ್ಪ ಹುಕ್ಕೇರಿಯವರಿಗೆ ನ್ಯಾಯ ಕೊಡಿಸಿ ಎಂದು ನೂರಾರು ಮಂದಿ ಹೇಳುತ್ತಿದ್ದೀರಿ. ನಾನು ಬೆಳಗಾವಿಗೆ ಬಂದೇ ಬರುತ್ತೇನೆ ಎಂದು ಹೇಳಿದ್ದಾರೆ.

ನನಗೆ ಫೋನುಗಳು, ಸಂದೇಶಗಳು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪೋಸ್ಟ್‌ಗಳ ಮೂಲಕ ನೀವು ನನ್ನನ್ನು ಕರೆಯುತ್ತಿದ್ದೀರಿ. ದೌರ್ಜನ್ಯಕ್ಕೆ ಒಳಗಾದ ಮಹದೇವಪ್ಪ ಅವರ ಮೇಲೆ ರಾತ್ರೋರಾತ್ರಿ ಒಂದು ಕೇಸ್ ದಾಖಲಿಸಲಾಗಿದೆ. ಅದೂ ಕೂಡ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಆರೋಪಿಸಲಾದ ಸುಳ್ಳು ಪ್ರಕರಣ ಎಂದು ದೂರಿದ್ದಾರೆ.
ನಾನು ಬಾಳೇಕುಂದ್ರಿಗೂ ಬಂದೇ ಬರ್ತೀನಿ. ಬಾಳೇಕುಂದ್ರಿ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನೀರಾವರಿ ತಜ್ಞ ಶಿವಪ್ಪ ಗುರುಬಸಪ್ಪ ಬಾಳೇಕುಂದ್ರಿಯವರ ಊರು. ಇಂಥಹ ಶ್ರೇಷ್ಠ ವ್ಯಕ್ತಿಗೆ ಜನ್ಮ ನೀಡಿದ ಅಪ್ಪಟ ಕನ್ನಡದ ಊರು ಬಾಳೇಕುಂದ್ರಿಗೆ ಬರಲು ನನಗೆ ಯಾವ ಹಿಂಜರಿಕೆ ಇರಲು ಸಾಧ್ಯ? ಕರ್ನಾಟಕದ ಮೂಲೆ ಮೂಲೆಯ ಯಾವ ಹಳ್ಳಿಗಾದರೂ ನಾನು ಹೋಗುತ್ತೇನೆ. ಅದು ನನ್ನ ಹಕ್ಕು, ಹೋಗಬೇಕಾದಾಗ ಹೋಗೇ ಹೋಗುತ್ತೇನೆ ಎಂದು ನಾರಾಯಣಗೌಡ ಹೇಳಿದ್ದಾರೆ.
ರಾಜಕಾರಣಿಗಳಿಗೆ ಕರವೇ ತರಾಟೆ
ಈಗ ಪ್ರಶ್ನೆ ಅದಲ್ಲ, ಗೌಡ್ರೇ ಬೆಳಗಾವಿಗೆ, ಬಾಳೇಕುಂದ್ರಿಗೆ ಬನ್ನಿ ಎಂದು ಕರೆಯುತ್ತಿರುವವರಿಗೆ ನನ್ನ ಒಂದಷ್ಟು ಪ್ರಶ್ನೆಗಳಿವೆ. ಎಲ್ಲಿದ್ದಾರೆ ಆ ನಿಮ್ಮ ಜನಪ್ರತಿನಿಧಿಗಳು? ನೀವೇ ಓಟು ಹಾಕಿ ಗೆಲ್ಲಿಸಿದ ಶಾಸಕರೆಲ್ಲ ಹೋದರು? ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಮಂತ್ರಿಗಳು ಬಾಯಿ ಹೊಲೆದುಕೊಂಡು ಕುಳಿತಿರುವುದು ಯಾಕೆ? ಎಲ್ಲಿದೆ ಆಡಳಿತ ಪಕ್ಷ? ಎಲ್ಲಿದೆ ವಿರೋಧ ಪಕ್ಷ? ಕನ್ನಡಿಗರ ಪಾಲಿಗೆ ಇವೆಲ್ಲ ಸತ್ತೇ ಹೋಗಿವೆಯೇ? ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಅಮಾಯಕ ಕನ್ನಡಿಗನ ಮೇಲೆ ಸುಳ್ಳು ಕೇಸ್ ಹಾಕಿದ್ದಾರಲ್ಲ? ಯಾರ ಚಿತಾವಣೆಯಿಂದ ಇದು ನಡೆದಿದೆ? ಸುಳ್ಳು ದೂರು ದಾಖಲಿಸಿಕೊಳ್ಳಿ ಎಂದು ಪೊಲೀಸರಿಗೆ ತಾಕೀತು ಮಾಡಿದ ಶಕ್ತಿಗಳು ಯಾವುವು? ಮರೆಯಲ್ಲಿ ನಿಂತು ಬಾಣ ಬಿಡುವ ಇವರ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ? ಎಂದು ಹರಿಹಾಯ್ದಿದ್ದಾರೆ.
ಮಂಗಳವಾರವೇ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕರವೇ ಕಾರ್ಯಕರ್ತರು, ಅಕ್ಕ ಪಕ್ಕದ ಜಿಲ್ಲೆಗಳ ಮುಖಂಡರೂ ಅಂದು ಬೆಳಗಾವಿಗೆ ಬರುತ್ತಿದ್ದೇವೆ. ನಾನು ಬರುವಾಗ ಸುಮ್ಮನೇ ಬಂದು ಹೋಗುವುದಿಲ್ಲ. ಇಷ್ಟು ಸೂಕ್ಷ್ಮ ನಮ್ಮ ಪೊಲೀಸ್ ಇಲಾಖೆಗೆ ಗೊತ್ತೇ ಇದೆ ಎಂದು ಭಾವಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಗೃಹ ಸಚಿವರು ಕೂಡಲೇ ಮಧ್ಯೆ ಪ್ರವೇಶಿಸಿ, ಮಹದೇವಪ್ಪ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯಬೇಕು. ಇದು ನನ್ನ ಆಗ್ರಹ. ಈ ಸಂಘರ್ಷ ಹೀಗೇ ಮುಂದುವರೆಯಲಿ ಎಂಬುದು ಅವರ ಆಸೆಯಾದರೆ, ನಾವೇನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications