ಜೈನ ಮುನಿ ಹತ್ಯೆ; ಆರೋಪಿಗಳು ಪೊಲೀಸ್ ವಶಕ್ಕೆ, ಡೈರಿ ರಹಸ್ಯ ಬಯಲು?
ಬೆಳಗಾವಿ, ಜುಲೈ 11; ಜೈನ ಮುನಿ ಕಾಮಕುಮಾರ ನಂದಿಮಹಾರಾಜ ಭೀಕರ ಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಜುಲೈ 17ರ ತನಕ ಪೊಲೀಸರ ವಶಕ್ಕೆ ನೀಡಿದ ಆದೇಶ ಹೊರಡಿಸಿದೆ. ಜೈನ ಮುನಿಗಳ ಡೈರಿ ಬಗ್ಗೆ ತನಿಖೆ ನಡೆಯಬೇಕಿದೆ.
ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮಂಗಳವಾರ ಆರೋಪಿ 1 ನಾರಾಯಣ ಮಾಳಿ ಮತ್ತು ಆರೋಪಿ 2 ಹಸನ್ ಸಾಬ್‌ರನ್ನು 7 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತು. ಚಿಕ್ಕೋಡಿ ಪೊಲೀಸರು ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

ರಹಸ್ಯ ಸ್ಥಳದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಮತ್ತು ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ಆರೋಪಿಗಳು ಜೈನ ಮುನಿಗಳನ್ನು ಹತ್ಯೆ ಮಾಡಿದ ಬಳಿಕ ರಕ್ತಸಿಕ್ತವಾಗಿದ್ದ ಬಟ್ಟೆ, ಅವರ ಡೈರಿಯನ್ನು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಶವವನ್ನು ತುಂಡು ತುಂಡಾಗಿದ್ದ ಆರೋಪಿಗಳು; ಆರೋಪಿಗಳು ಜೈನ ಮುನಿ ಕಾಮಕುಮಾರ ನಂದಿಮಹಾರಾಜರನ್ನು ಹತ್ಯೆ ಮಾಡಿದ ಬಳಿಕ ಶವವನ್ನು ತುಂಡು ತುಂಡು ಮಾಡಿದ್ದರು. ಅಲ್ಲದೇ ಗೋಣಿ ಚೀಲದಲ್ಲಿ ತುಂಡುಗಳನ್ನು ಹಾಕಿಕೊಂಡು ಬಂದು, ಕಬ್ಬಿನ ಗದ್ದೆಯಲ್ಲಿನ ಕೊಳವೆ ಬಾವಿಗೆ ಎಸೆದಿದ್ದರು.
ಈ ಸಂದರ್ಭದಲ್ಲಿ ಜೈನ ಮುನಿ ಕಾಮಕುಮಾರ ನಂದಿಮಹಾರಾಜರ ಕೊಠಡಿಯಿಂದ ಅವರ ಬಟ್ಟೆ, ಡೈರಿಯನ್ನು ಸಹ ಆರೋಪಿಗಳು ಕಬ್ಬಿನ ಗದ್ದೆಗೆ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ. ಡೈರಿ ಮತ್ತು ಬಟ್ಟೆಯನ್ನು ಸುಟ್ಟು ಹಾಕಿದ್ದೇವೆ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.
ಜೈನ ಮುನಿಗಳ ಜೊತೆಗಿನ ಹಣಕಾಸು ವ್ಯವಹಾರವೇ ಕೊಲೆಗೆ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಡೈರಿಯಲ್ಲಿ ಮುನಿಗಳು ಹಣದ ವ್ಯವಹಾರದ ಕುರಿತು ಉಲ್ಲೇಖಿಸಿದ್ದರೆ? ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಕಡೆ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅಲ್ಲದೇ ಪಕ್ಷ ಸತ್ಯ ಶೋಧನೆ ಸಮಿತಯೊಂದನ್ನು ರಚನೆ ಮಾಡಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಸಮಿತಿ ಮಂಗಳವಾರ ಚಿಕ್ಕೋಡಿಯ ಹಿರೇಕೊಡಿ ನಂದಿ ಪರ್ವತದಲ್ಲಿರುವ ಜೈನ ಮುನಿ ಕಾಮಕುಮಾರ ನಂದಿಮಹಾರಾಜ ಆಶ್ರಮಕ್ಕೆ ಭೇಟಿ ನೀಡಿತ್ತು. ಸದನಲ್ಲಿ ಪ್ರಕರಣದ ಸಿಬಿಐ ತನಿಖೆಗೆ ಪಕ್ಷ ಬಿಗಿ ಪಟ್ಟು ಹಿಡಿದಿದೆ.
ಗೃಹ ಸಚಿವರ ಹೇಳಿಕೆ; ಜೈನ ಮುನಿಗಳ ಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. "ಚಿಕ್ಕೋಡಿಯ ಕಾಮಕುಮಾರ ಮುನಿ ಹತ್ಯೆ ಪ್ರಕರಣದ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ಕೇಂದ್ರ ಸಚಿವರು ರಾಜಕೀಯ ಲಾಭಕ್ಕಾಗಿ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ" ಎಂದರು.
"ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬರಬಾರದು. ಯಾವುದೇ ಸರ್ಕಾರವಿದ್ದರೂ ಸರಿಯಾದ ತನಿಖೆಯಾಗಬೇಕು. ರಾಜಕೀಯ ಮಾಡುವುದಾದರೆ ಚುನಾವಣೆ ಸಂದರ್ಭದಲ್ಲಿ ಮಾಡಲಿ ಅಥವ ತತ್ವ ಸಿದ್ಧಾಂತದ ಮೇಲೆ ಮಾಡಲಿ. ಇಂತಹ ವಿಚಾರವನ್ನು ಸರ್ಕಾರ ಮತ್ತು ಕಾನೂನಿಗೆ ಬಿಡಿ" ಎಂದು ಗೃಹ ಸಚಿವರು ಸಲಹೆ ನೀಡಿದರು.
"ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ತನಿಖೆಯ ನಂತರ ಎಲ್ಲವೂ ಬಯಲಾಗಲಿದೆ" ಎಂದರು.












Click it and Unblock the Notifications