ಬೆಳಗಾವಿ ವಿಧಾನಸೌಧ ವಾಸ್ತು ಪ್ರಕಾರ ಇದ್ಯಾ?
ಬೆಳಗಾವಿ, ನ. 4 : ವಿಧಾನಸಭೆ, ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಸ್ವಾರಸ್ಯಗಳಿಗೇನು ಕಡಿಮೆಯಿಲ್ಲ. ಸಭೆಯಲ್ಲಿ ವಾಟಾಳ್ ನಾಗರಾಜ್, ಶಂಕರಲಿಂಗೇಗೌಡ ಇಲ್ಲ ಅನ್ನೋ ಕೊರತೆ ಬಿಟ್ರೆ ಹಾಸ್ಯ ಚಟಾಕಿಗಳು, ಪರಸ್ಪರ ಕಾಲೆಳೆಯೋದು, ಗೇಲಿಮಾಡೋದು ನಡೀತಿರುತ್ತೆ.
ಹೌದು. ಸಭೆಯಲ್ಲಿ ಆರೋಗ್ಯಕರ ಚರ್ಚೆ ಎಲ್ಲಿದೆ ಸ್ವಾಮಿ ಅಂತಾ ನೀವು ಅಂದುಕೊಳ್ಳಬಹುದು. ಆದ್ರೆ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನ ಕೆಲವು ಸ್ವಾರಸ್ಯಕರ ಚರ್ಚೆಗೆ ವೇದಿಕೆ ಆಗ್ತಿದೆ. ಅಧಿವೇಶನದ 7ನೇ ದಿನ ಮಂಗಳವಾರ ವಾಸ್ತು ವಿಷ್ಯ ಸಭೆಯಲ್ಲಿ ಚರ್ಚೆಗೆ ಬಂತು. ಅಂದಹಾಗೆ ಇದು ಪ್ರಸ್ತಾಪ ಆಗಿದ್ದು ಸುವರ್ಣಸೌಧ "ಆಡಳಿತ ಸೌಧ" ಯಾಕೆ ಆಗ್ತಿಲ್ಲ ಅನ್ನೋ ವಿಷಯ ಬಂದಾಗ.
ಹಾಲಿ ಕೆಜೆಪಿ ಮುಖಂಡ, ಭಾವಿ ಬಿಜೆಪಿ ಸರದಾರ (ಗೊತ್ತಿಲ್ಲ) ಮಾಜಿ ಸಿಎಂ ಯಡಿಯೂರಪ್ಪ ಅವರು ಇಷ್ಟು ದುಡ್ಡು ಖರ್ಚು ಮಾಡಿದರೂ (422 ಕೋಟಿ ರೂಪಾಯಿ) ಯಾಕೆ ಇಲಾಖೆಗಳ ಕಚೇರಿಗಳನ್ನ ಇಲ್ಲಿಗೆ, ಅಂದ್ರೆ ಬೆಳಗಾವಿಗೆ ಸ್ಥಳಾಂತರಿಸಿಲ್ಲ ಅಂತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ ನಮ್ಮ "ಅಕ್ಕರೆಯ" ಸಕ್ಕರೆ ಸಚಿವ, ಬೆಳಗಾವಿಯವರೇ ಆದ ಪ್ರಕಾಶ್ ಹುಕ್ಕೇರಿ ವಾಸ್ತು ಚರ್ಚೆಗೆ ಧುಮುಕಿದ್ರು.

ಅವರು ಹೇಳಿದ್ದೇನಂದ್ರೆ, "ಹೌದು ಯಡಿಯೂರಪ್ಪ ಅವರೇ.. ನೀವು ಆಸಕ್ತಿ ವಹಿಸಿ ಸುವರ್ಣಸೌಧ ಕಟ್ಟಿದ್ರಲ್ಲ ಆಗ ವಾಸ್ತು ಎಲ್ಲಾ ಸರಿಯಾಗಿ ನೋಡಿದ್ರಾ" ಅಂತ ಕಟ್ಟಾ ವಾಸ್ತು ನಂಬಿಕಸ್ತ ಯಡಿಯೂರಪ್ಪ ಅವರನ್ನ ಕೇಳಿದ್ರು. ಹುಕ್ಕೇರಿ ಅವರು ತಮಾಷೆಗೆ ಕೇಳಿದ್ರೋ ಏನೋ, ಯಾವನಿಗ್ಗೊತ್ತು. ಆದ್ರೆ ಸಭೆಯಲ್ಲಿನ ಶಾಸಕರು ಮಾತ್ರ ಫುಲ್ ಸೈಲೆಂಟ್ ಆಗಿ ಹೌದಾ? ಈ ಸೌಧ ಕಟ್ಟುವಾಗ ಏನೋ ವಾಸ್ತು ದೋಷ ಆಗಿಬಿಟ್ಟಿದೆ ಅನ್ನೋ ರೀತಿಯಲ್ಲಿ ಬಿಎಸ್‍ವೈ ಕಡೆ ಮಿಕಮಿಕ ನೋಡ್ತಿದ್ರು.
ನಿಮ್ಮ ಯಡಿಯೂರಪ್ಪ ಅವರು ಕೂಡಾ ಅಷ್ಟೇ ಗಂಭೀರವಾಗಿ - "ಸ್ವಾಮಿ ನಾವು ನೂರಾರು ಕೋಟಿ ಖರ್ಚು ಮಾಡಿ ಹೇಗೆ ಬೇಕೋ ಹಾಗೆ ಈ ಕಟ್ಟಡ ಕಟ್ಟಿಲ್ಲ.. ನಾವು ಎಲ್ಲಾ ವಾಸ್ತುವನ್ನು ಚೆನ್ನಾಗಿ ನೋಡಿಸಿಯೇ ಕಟ್ಟಿಸಿದ್ದೇವೆ" ಅಂದ್ರು. "ನಾನು ಸುಳ್ಳು ಹೇಳ್ತಿಲ್ಲ.. ಸ್ವತಃ ನಾನೇ ಈ ಸದನದ ಬಾವಿಗಿಳಿದು ಧರಣಿ ಮಾಡ್ತಿದ್ದಾಗ ರಾತ್ರಿ ಇಡೀ ಇಲ್ಲೇ ಮಲಗಿದ್ದೆ. ಸೊಂಪಾದ ನಿದ್ದೆ ಬಂತು. ಹೀಗಾಗಿ ಸಕ್ಕರೆ ಸಚಿವರೆ, ನೀವೂ ಬೇಕಾದ್ರೆ ಇಲ್ಲಿ ರಾತ್ರಿ ಬಂದು ಮಲಗಿಕೊಂಡು ನೋಡಿ. ನಿಮಗೆ ನಿಮ್ಮ ಖಾತೆಯ ಸಕ್ಕರೆ ರುಚಿಯಷ್ಟೇ ನಿದ್ದೆ ಚೆನ್ನಾಗಿ ಬರುತ್ತೆ" ಅಂತ ಹಾಸ್ಯ ಪಟಾಕಿ ಹಾರಿಸಿದ್ರು.
ಆದ್ರೆ, ನಮ್ಮ ಮೇಲುಕೋಟೆ ಎಂಎಲ್ಎ, ರೈತ ಮುಖಂಡ ಪುಟ್ಟಣ್ಣ ಅವರ ಪ್ರಕಾರ, ವಾಸ್ತು ಅಂದ್ರೆ ಗಾಳಿ ಬೆಳಕು ಚೆನ್ನಾಗಿರೋದು ಅಷ್ಟೇ ಅಂತೆ. ಕಬ್ಬಿನ ಬೀಜವನ್ನ ಪೂರ್ವದಿಂದ ಪಶ್ಚಿಮ ಮುಖವಾಗಿ ಸಾಲು ಹೊಡೆದು ಬಿತ್ತಿದ್ರೆ ಕಬ್ಬು ದೊಡ್ಡದಾದ ಮೇಲೆ ಗಾಳಿ ಬೆಳಕು ಚೆನ್ನಾಗಿ ಸಿಗುತ್ತೆ. ಹಾಗಾಗಿ ಕಬ್ಬು ಚೆನ್ನಾಗಿ ಬೆಳೆಯತ್ತೆ. ನಮಗೆ, ಅಂದ್ರೆ ರೈತರಿಗೆ ಗೊತ್ತಿರೋ ವಾಸ್ತು ಇಷ್ಟೇ ನೋಡಿ ಸಭಾಧ್ಯಕ್ಷರೇ (ಕಾಗೋಡು ತಿಮ್ಮಪ್ಪ) ಅಂತ ವಾಸ್ತು ಬಗೆಗಿನ ಅತೀವ ನಂಬಿಕೆಯಿಟ್ಟುಕೊಂಡಿದ್ದ ರಾಜಕಾರಣಿಗಳಿಗೆ ಸ್ವಲ್ಪ ತಿಳಿ ಹೇಳಿದ್ರು.
ಯಾರಿಗೆ ಕೇಳಿಸ್ತೋ, ಯಾರಿಗೆ ಬಿಡ್ತೋ ನಾವು ಬೇರೆ ಕಾಣೆವು. ಆದ್ರೆ, ವಾಸ್ತುವನ್ನು ನಂಬುವ ಮತ್ತು ಅದನ್ನ ವಿರೋಧಿಸುವವರು ಇದನ್ನು ಟಿವಿಯಲ್ಲಿ ಕೇಳಿಸ್ಕೊಂಡ್ರು ಮತ್ತು ಇಂಟರ್ ನೆಟ್ಟಿನಲ್ಲಿ ಓದಿಕೊಂಡ್ರು.












Click it and Unblock the Notifications