ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನಾನು ರಾಜೀನಾಮೆ ನೀಡಿಲ್ಲ: ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 2: ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ನಾನು ರಾಜೀನಾಮೆ ನೀಡಿಲ್ಲ, ಮೈತ್ರಿ ಸರ್ಕಾರದ ನಿಲುವು ಸರಿ ಇಲ್ಲ ಎಂದು ರಾಜೀನಾಮೆ ನೀಡಿದ್ದೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜೀನಾಮೆ ನೀಡಿದ್ದರ ಹಿಂದೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶವಿರಲಿಲ್ಲ. ಮೈತ್ರಿ ಸರ್ಕಾರದ ನಡವಳಿಕೆಯಿಂದ ಬೇಸರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಣ ಸವದಿ ದೊಡ್ಡ ಮನುಷ್ಯ , ನಾವು ಸಣ್ಣ ಜನ ಲಕ್ಷ್ಮಣ ಸವದಿಗೆ ನಮಗೆ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿದೆಯೇ ಎಂದು ಮತ್ತೊಮ್ಮೆ ಅಸಮಾಧಾನ ತೋಡಿಕೊಂಡರು.

ಬಿಎಸ್ ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ ಎಂದು ಕೇಳಿದ್ದೇನೆ, ಸತೀಶ್ ಜಾರಕಿಹೊಳಿ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುವೆ, ಒಮ್ಮೆ ತನ್ನ ಸಾಲಗಾರ ಅಂತಾರೆ, ಇನ್ನೊಮ್ಮೆ ಆಸ್ತಿ ಮಾಡಿದ್ದಾನೆ ಅಂತಾರ, ಯಾವುದಾದರೂ ಒಂದನ್ನು ಹೇಳಲಿ ಎಂದರು.
ನಾವು ಸತೀಶ್ ಜಾರಕಿಹೊಳಿ ಆಪ್ತನನ್ನು ಕರೆದು ಕೇಳಿದ್ದೇನೆ, ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು, ಸತೀಶ್ ಗೆ ಈಗ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡದ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದರು. ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ರಮೇಶ್ ಜಾರಕಿಹೊಳಿಗೆ ಸಾಥ್ ನೀಡಿದರು.












Click it and Unblock the Notifications