ಬಿರು ಬೇಸಿಗೆಯಲ್ಲೂ ಮೈದುಂಬಿ ಧುಮ್ಮಿಕ್ಕುತ್ತಿರುವ ಇತಿಹಾಸ ಪ್ರಸಿದ್ಧ ಗೋಕಾಕ್ ಫಾಲ್ಸ್-ಏನಿದು ಮೋಡಿ?
ಬೆಳಗಾವಿ, ಮೇ 14: ಸಾಮಾನ್ಯವಾಗಿ ಮಳೆಗಾಲದಲ್ಲಿ ಕೆರೆ, ಜಲಾಶಗಳು, ಫಾಲ್ಸ್‌ಗಳು ತುಂಬಿ ಹರಿಯುವುದನ್ನು ನೋಡಿದ್ದೇವೆ. ಆದರೆ ಇದೀಗ ಬೇಸಿಗೆಯಲ್ಲೇ ಪ್ರಸಿದ್ಧ ಫಾಲ್ಸ್‌ಹೊಂದು ಧುಮ್ಮಿಕ್ಕಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಅಪರೂಪದ ದೃಶ್ಯ ಬೆಳಗಾವಿ ಜಿಲ್ಲಿಯಲ್ಲಿ ಕಂಡುಬಂದಿದೆ. ಹಾಗಾದರೆ ಆ ಫಾಲ್ಸ್ ಯಾವುದು? ಅದರ ವಿಶೇಷತೆ ಏನು ಎಂದು ಇಲ್ಲಿ ತಿಳಿಯೋಣ ಬನ್ನಿ.
ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ರಣಭೀಕರ ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದ್ದು, ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಬಿರು ಬೇಸಿಗೆಯಲ್ಲೂ ಸುಪ್ರಸಿದ್ಧ ಭಾರತದ ನಯಾಗರ ಜಲಪಾತ ಎಂದೇ ಹೆಸರುವಾಸಿಯಾಗಿರುವ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇತ್ತ ಲಗ್ಗೆ ಇಡುತ್ತಲೇ ಇದ್ದಾರೆ.

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಫಾಲ್ಸ್ ಈಗ ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿದೆ. ಘಟಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದ್ದು, ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ನದಿಪಾತ್ರದ ಜನರಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಲಾಶಯದಿಂದ ಕಳೆದ ಮೂರು ದಿನಗಳಿಂದ ಹಂತಹಂತವಾಗಿ ಒಂದೂವರೆ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಿತ್ಯ ನೀರು ಬಿಡುಗಡೆ ಆಗುತ್ತಿರುವ ಹಿನ್ನೆಲೆ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದೆ. ಇನ್ನು 180 ಅಡಿ ನೀರು ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಪ್ರವಾಸಿಗರಿಗೆ ಹಬ್ಬವಾಗಿದೆ.












Click it and Unblock the Notifications