ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿಗತಿ ಸರಿ ಇಲ್ಲ: ಗೋವಿಂದ ಕಾರಜೋಳ
ಬೆಳಗಾವಿ, ಮೇ 29: ''ಸಿದ್ದರಾಮಯ್ಯ ಕೇವಲ ರಾಜಕಾರಣಿ ಅಷ್ಟೇ ಅಲ್ಲ ಹಿರಿಯ ನಾಯಕರು, ವಕೀಲ ವೃತ್ತಿ ಮಾಡಿದವರು. ಸಿದ್ದರಾಮಯ್ಯ ಮಾತನಾಡುವಾಗ ಇತ್ತೀಚೆಗೆ ಮಾನಸಿಕ ಸ್ಥಿತಿಗತಿ ಸರಿಯಿಲ್ಲ. ಆವೇಶದಿಂದ ಮಾತನಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸತ್ಯವನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು,'' ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ್ ಕಾರಜೋಳ, ಸಿದ್ದರಾಮಯ್ಯ ಕೇವಲ ರಾಜಕಾರಣಿ ಅಷ್ಟೇ ಅಲ್ಲ ಹಿರಿಯ ನಾಯಕರು, ವಕೀಲ ವೃತ್ತಿ ಮಾಡಿದವರು. ಮಾತನಾಡುವಾಗ ಇತ್ತೀಚೆಗೆ ಮಾನಸಿಕ ಸ್ಥಿತಿಗತಿ ಸರಿ ಇರುವುದಿಲ್ಲ ಅವರದ್ದು. ಆವೇಶದಿಂದ ಮಾತನಾಡುತ್ತಾರೆ ಒಂದು ಸತ್ಯವನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಈ ದೇಶದಲ್ಲಿ ದೇಶಭಕ್ತಿ ಹೆಚ್ಚಿಸುವ ಕೆಲಸ ಆರ್‌ಎಸ್‌ಎಸ್ ಯುವಜನಾಂಗಕ್ಕೆ ಮಾಡ್ತಿದೆ ಎಂದರು.
ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳಸಲು ಕಾರ್ಯಕ್ರಮ ಹಾಕಿಕೊಂಡು. ಮನೆ ಮಠ ಬಿಟ್ಟು ಸಂತರ ಹಾಗೇ ಆರ್‌ಎಸ್‌ಎಸ್ ಕಾರ್ಯಕರ್ತರು ಕಾರ್ಯಾಲಯದಲ್ಲಿ ಉಳಿದುಕೊಂಡು ದೇಶ ಸೇವೆ ಮಾಡ್ತಾರೆ. ಪೂರ್ವಾಶ್ರಮದ ಹಂಗು ತೊರೆದು ದೇಶಕ್ಕೆ ದುಡಿಯುವ ಸ್ವಯಂ ಸೇವಕರ ಸಂಘ ಇದಾಗಿದ್ದು ಅದರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ ಎಂದರು.

ಆರ್‌ಎಸ್‌ಎಸ್ ಕಾರ್ಯಕರ್ತರಿಂದ ದೇಶ ಸೇವೆ
ಈ ದೇಶದಲ್ಲಿ ಉತ್ತಮ ಕೆಲಸ ಮಾಡಿರುವವರು ಆರ್‌ಎಸ್‌ಎಸ್ ನವರು. ಅವರ ಬಗ್ಗೆ ಹಗುರವಾಗಿ ಮಾತನಾಡತಕ್ಕದ್ದು ಅವರ ಕೀಳ ಅಭಿರುಚಿ ಅಷ್ಟೇ. ಆರ್‌ಎಸ್‌ಎಸ್ ಮೂಲ ಕೆದಕಿದವರ ಮೂಲ ಎಲ್ಲೇಲಿದೆ ಅಂತಾ ಹೇಳಿದ್ದಾರೆ. ಆವೇಶದಿಂದ ಮಾತನಾಡುತ್ತಾರೆ ಒಂದು ಸತ್ಯವನ್ನ ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲಾ ಅವರ ಸಲಹೆ ಸೂಚನೆಗಳಿದ್ರೇ ತಿಳಿಸುವ ಕೆಲಸ ಮಾಡಬೇಕು ಎಂದರು.

ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ: ಕಳವಳ
ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಆದ್ಯತೆ ಆಗಿತ್ತು. ಆದರೀಗ ದೇಶಪ್ರೇಮ ಕಡಿಮೆಯಾಗಿದ್ದಲ್ಲದೇ ಕಾಲಘಟ್ಟದ ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನಗರದ ಕೆಎಲ್ಇ ಸಂಸ್ಥೆಯ ಜಿರಗಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಮಾದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಇದೇ ರೀತಿ ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು. ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು.

ಪತ್ರಕರ್ತರು ಕೂಡ ಸಾಹಿತಿಗಳೇ..
12ನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸ್ಥಾನಮಾನ ತಂದು ಕೊಟ್ಟಿದ್ದಾರೆ. ಪತ್ರಕರ್ತರು ಕೂಡ ಸಾಹಿತಿಗಳೇ. ಕೆಲವರು ವಸ್ತುನಿಷ್ಠ ವರದಿ ಮಾಡಿದರೆ, ಕೆಲವರು ಸುದ್ದಿಯನ್ನು ಸೃಷ್ಟಿಸುತ್ತಾರೆ. ಆದರೆ, ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ. ಪೀತಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಇಂತಹ ಕಾಲಘಟ್ಟದಲ್ಲಿ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ. ಪತ್ರಿಕಾಧರ್ಮವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ. ಸತ್ಯವನ್ನು ತಿಳಿಸುವ, ಜನರ ಜಾಗೃತಿ ಮಾಡುವ ಕೆಲಸವಾಗಬೇಕು. ಅಭಿವೃದ್ಧಿ, ದೇಶದ ಕಲೆ-ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಪತ್ರಕರ್ತರ ಯಾಂತ್ರೀಕೃತ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಚಿವ ಕಾರಜೋಳ ಕಿವಿಮಾತು ಹೇಳಿದರು.

ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತಿಲ್ಲ: ಸೋಮಶೇಖರ್
ಮೈಸೂರಿನಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಸುಮ್ಮನೆ ಟೀಕೆ ಮಾಡುವ ಬದಲು ವಿರೋಧ ಪಕ್ಷವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೀಕ್ಷಿಸಲಿ. ಆರ್‌ಎಸ್‌ಎಸ್ ಬಗ್ಗೆ 1% ಜ್ಞಾನ ಇಲ್ಲ ಎಂದು ಲೇವಡಿ ಮಾಡಿದರು.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಬಗ್ಗೆ ಅಧ್ಯಯನ ಮಾಡಿಲ್ಲ. ಅವರನ್ನು ಒಮ್ಮೆ ಆರ್‌ಎಸ್‌ಎಸ್ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್‌ಎಸ್‌ಎಸ್ ಕುರಿತ ಪುಸ್ತಕ ನೀಡುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾತಿಗೆ ತೂಕ ಇತ್ತು. ಆದರೀಗ ಅವರ ಪಕ್ಷದ ಕಾರ್ಯಕರ್ತರೇ ಅವರ ಮಾತನ್ನು ಕೇಳುತ್ತಿಲ್ಲ. ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಲಾಗಿದೆ. ಅವರ ಮಾತಿಗೆ ಕಿಮ್ಮತ್ತಿಲ್ಲ. ಕಡೆಗಣನೆ ಮಾಡುವಾಗ ಹೀಗೆ ಆರ್‌ಎಸ್‌ಎಸ್, ಮತ್ತೊಂದು ವಿಚಾರ ಸೃಷ್ಟಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ ಎಂದು ಲೇವಡಿ ಮಾಡಿದರು.












Click it and Unblock the Notifications