ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ
ಬೆಳಗಾವಿ, ಏಪ್ರಿಲ್ 15: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದಷ್ಟೆ ಮೃತಪಟ್ಟಿದ್ದ 80 ವರ್ಷದ ವೃದ್ಧೆ ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿರುವುದು ಇಂದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಮೊದಲ ಬಲಿಯಾದಂತಾಗಿದೆ.
ತಾಲೂಕಿನ ಹಿರೇಬಾಗೇವಾಡಿಯ ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ವೃದ್ಧೆಯೊಬ್ಬರು ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಕೊರೊನಾ ಸೋಂಕಿನಿಂದಲೇ ಅವರು ಮೃತಪಟ್ಟಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ.
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಿಂದ ವಾಪಸ್ಸಾಗಿದ್ದ ಯುವಕನ ಅಜ್ಜಿ ಇವರಾಗಿದ್ದರು. ಎರಡು ದಿನಗಳ ಹಿಂದೆ ವೃದ್ಧೆ ಮೃತಪಟ್ಟಾಗ ಶಂಕೆ ವ್ಯಕ್ತಪಡಿಸಿ ಕೂಡಲೇ ವೃದ್ಧೆಯ ಗಂಟಲು ದ್ರವದ ಮಾದರಿಯನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ವರದಿ ಬಂದ ನಂತರ ಕೊರೊನಾ ಸೋಂಕು ಇದ್ದಿದ್ದು ತಿಳಿದು ಬಂದಿದೆ.

ಜನರ ಆರೋಗ್ಯದ ದೃಷ್ಟಿಯಿಂದ ವೃದ್ಧೆಯ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಗಿದೆ. ಈ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದಿರುವ 21 ಜನರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.












Click it and Unblock the Notifications