ಟ್ಯೂಬ್ ಮೂಲಕ ಕೆರೆ ದಾಟುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ
ಬೆಳಗಾವಿ ಆಗಸ್ಟ್ 8: ಬೆಳಗಾವಿಯ ಕಿತ್ತೂರಿನ ನಿಂಗಾಪುರ ಗ್ರಾಮದ ಹುಲಿಕೆರೆ ಹಿನ್ನೀರಿನಲ್ಲಿ ನಿತ್ಯ ಶಾಲೆಗೆ ಹೋಗಲು ಟ್ಯೂಬ್ ಮೂಲಕ ಕೆರೆ ದಾಟುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ವಿದ್ಯಾರ್ಥಿಗಳು ರಬ್ಬರ್ ಟ್ಯೂಬ್‌ಗಳ ಮೇಲೆ ಕುಳಿತು ಕೆರೆ ದಾಟುತ್ತಿದ್ದ ಸುದ್ದಿ ಮಾದ್ಯಮದಲ್ಲಿ ಪ್ರಸಾರ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಸದ್ಯ ಶಾಲೆಗೆ ಹೋಗುವ ಮಕ್ಕಳಿಗೆ ಕೆರೆ ದಾಟಲು ಫೈಬರ್ ಬೋಟ್ ಅನ್ನು ನೀಡಲಾಗಿದೆ. ಎಸ್‌ಡಿಆರ್‌ಎಫ್ ತಂಡ ಮಕ್ಕಳಿಗೆ ಸುರಕ್ಷಿತ ಜಾಕೇಟ್ ನೀಡಿ ಫೈಬರ್ ಬೋಟ್ ಮೂಲಕ ಇಂದು ಕೆರೆ ದಾಟಿಸಿದರು. ಇದರಿಂದ ಮಕ್ಕಳು ಸಂತೋಷವನ್ನು ವ್ಯಕ್ತಪಡಿದ್ದಾರೆ.

ವಿದ್ಯಾರ್ಥಿಯೊಬ್ಬಳು ಮಾತನಾಡಿ, 'ನಮಗೆ ಶಾಲೆಗೆ ಹೋಗಲು ತುಂಬಾ ಕಷ್ಟ ಆಗುತ್ತಿತ್ತು. ಕೆರೆ ದಾಟಲು ರಬ್ಬರ್ ಟ್ಯೂಬ್ ಬಳಕೆ ಮಾಡುತ್ತಿದ್ದೆವು. ಇದರಿಂದ ನಮ್ಮ ಬಟ್ಟೆ, ಬ್ಯಾಗ್, ಪುಸ್ತಕಗಳೆಲ್ಲವೂ ಒದ್ದೆಯಾಗುತ್ತಿದ್ದವು. ಅಲ್ಲದೇ ತುಂಬಾ ಭಯ ಕೂಡ ಆಗುತ್ತಿತ್ತು. ಆದರೀಗ ನಮಗೆ ಎಸ್‌ಡಿಆರ್‌ಎಫ್ ತಂಡ ಫೈಬರ್ ಬೋಟ್ ಮೂಲಕ ಶಾಲೆಗೆ ಕರೆದುಕೊಂಡು ಹೋಗುತ್ತಿದೆ. ತುಂಬಾ ಖುಷಿಯಾಗಿದೆ' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಟ್ಯೂಬ್ ಮೇಲೇರಿ ಕೂತರೆ, ಅತ್ತ ಪೋಷಕರು ದಂಡೆಯಲ್ಲಿ ಹಗ್ಗದಿಂದ ಎಳೆದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ಕೆರೆ ದಾಟಲು ಸೇತುವೆ ಕೂಡ ಇಲ್ಲ. ಇದಕ್ಕಾಗಿ ಗ್ರಾಮಸ್ಥರು ಸೇತುವೆ ನಿರ್ಮಾಣಕ್ಕಾಗಿ ಇಪ್ಪತ್ತು ವರ್ಷದಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಗಮನವೇ ಹರಿಸಿಲ್ಲ.
ಕೆರೆ ತುಂಬಿ ಹಿನ್ನೀರು ಗ್ರಾಮದ ಸಂಪರ್ಕ ಬಂದ್ ಆಗಿದೆ. ಇದರಿಂದ ಗ್ರಾಮಸ್ಥರು ಹೊರಗೆ ಬರಬೇಕಾದರೆ ತುಂಬಿದ ಹೊಳೆಯಲ್ಲಿ ಟೈರ್ ಟ್ಯೂಬ್ ಗಳನ್ನೇ ಬೋಟ್‌ಗಳನ್ನಾಗಿ ಮಾಡಿಕೊಂಡು ಬರಬೇಕಿದೆ. ಶಾಲಾ ಮಕ್ಕಳು ಕೂಡ ಶಾಲೆಗೆ ಬರಬೇಕಾದ್ರೆ ಜೀವ ಕೈಯಲ್ಲಿ ಹಿಡಿದುಕೊಂಡು ಟ್ಯೂಬ್‌ಗಳ ಮೇಲೆ ಕುಳಿತು ಬರಬೇಕಿತ್ತು. ಆದರೆ ಮಕ್ಕಳ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಅರ್ಭಟ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೃಷ್ಣ ನದಿಗೆ 2.90 ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾಗಿ ಚಿಕ್ಕೋಡಿ ಉಪವಿಭಾಗದಲ್ಲಿ 30 ಸಾವಿರ ಹೆಕ್ಟೇರ್ ಭೂಪ್ರದೇಶ ಜಲಾವೃತಗೊಂಡಿದೆ. ಕಬ್ಬು, ಸೋಯಾಬಿನ್, ಉದ್ದು, ಮೆಕ್ಕೆಜೋಳ ಸಂಪೂರ್ಣ ಸರ್ವನಾಶವಾಗಿವೆ. ಎಕರೆಗೆ 50 ಸಾವಿರದಂತೆ ಬೆಳೆ ಪರಿಹಾರ ನೀಡ್ಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ.
ಶಾಲಾ ಮಕ್ಕಳ ಕೂಡಲು ಕಟ್ ಮಾಡಿದ ಶಿಕ್ಷಕ
ಶಾಲಾ ಮಕ್ಕಳ ಕೂಡಲು ಕಟ್ ಮಾಡಿದ ಶಿಕ್ಷಕನಿಗೆ ಪೋಷಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ಮಕ್ಕಳಿಗೆ ಬಿದ್ದಿವಾದ ಹೇಳಬೇಕಾದ ಶಿಕ್ಷಕ, ಯಡವಟ್ಟು ಮಾಡಿದ್ದಾನೆ. ಶಾಲಾ ಮಕ್ಕಳು ಹೆಚ್ಚಿನ ಕೂದಲು ಬಿಟ್ಟಿದ್ದಾರೆ ಎನ್ನುವ ಕಾರಣಕ್ಕೆ ಶಿಕ್ಷಕ ತಾನೇ ಕೂದಲು ಕಟ್ ಮಾಡಿದ್ದಾನೆ. ಈ ವೇಳೆ ಓರ್ವ ವಿದ್ಯಾರ್ಥಿ ಹಣೆಗೆ ಗಾಯವಾಗಿದ್ದು ಇದರಿಂದ ಕೆರಳಿದ ಮಕ್ಕಳು ಪೋಷಕರು ಶಾಲೆಗೆ ಬಂದು ಶಿಕ್ಷಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ.
ಗದಗ-ಬೆಟಗೇರಿಯ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಉತ್ತರಿಸಿದ ಶಿಕ್ಷಕ ಬೆನೋಯ್,'ನಮ್ಮ ಶಾಲೆಯಲ್ಲಿ ರೂಲ್ಸ್ ಇದೆ' ಎಂದು ಮಂಡುವಾದ ಮಾಡಿದ್ದಾನೆ. ಶ್ರಾವಣ ಮಾಸ ಮಕ್ಕಳಿಗೆ ಕಟ್ಟಿಂಗ್ ಮಾಡಿಸುವುದಿಲ್ಲ. ಆದರೂ ತೊಂದರೆಯಾದರೆ ಶಿಕ್ಷಕ ಪೋಷಕರ ಗಮನಕ್ಕೆ ತರಬೇಕಿತ್ತು. ಆದರೆ ತಾನೇ ಸ್ವಂತ ನಿರ್ಧಾರದಿಂದ ಮಕ್ಕಳ ಕೂದಲು ತೆಗೆದಿದ್ದಾನೆ. ಇದರಿಂದ ಕೋಪಗೊಂಡ ಪೋಷಕರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.












Click it and Unblock the Notifications