Congress Guarantee: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ; ಹೊಸ ಗ್ಯಾರಂಟಿ ಘೋಷಿಸಿದ ಪ್ರಿಯಾಂಕಾ
ಬೆಳಗಾವಿ, ಏಪ್ರಿಲ್ 30: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೇರಲು ಮತ್ತು ಮತಗಳನ್ನು ಸೆಳೆಯಲು ಮತದಾರರಿಗೆ ಇನ್ನಿಲ್ಲದ ಆಶ್ವಾಸನೆಗಳನ್ನು ಘೋಷಿಸುತ್ತಿವೆ.
ಇದೇ ವೇಳೆ ರಾಜ್ಯ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಿದ್ದು, ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರವಾಗಿ ಪ್ರಚಾರದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ರೂ. ವರೆಗೆ ವೇತನ ಹೆಚ್ಚಿಸಲಾಗುವುದು ಮತ್ತು ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ವರೆಗೆ ವೇತನ ಹೆಚ್ಚಿಸಲಾಗುವುದು ಎಂದು ಹೊಸ ಘೋಷಣೆ ಮಾಡಿದರು.
"ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಯಾವುದೇ ಪಿಂಚಣಿ ಸೌಲಭ್ಯ ಸಿಗಲ್ಲ. ಹೀಗಾಗಿ ಅಂಗನವಾಡಿ ಮಹಿಳೆಯರಿಗೆ 15 ಸಾವಿರ ರೂ. ವರೆಗೆ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವರೆಗೆ ವೇತನ ಹೆಚ್ಚಿಸಲಾಗುವುದು. ಇದೇ ವೇಳೆ ಬಿಸಿಯೂಟ ಕಾರ್ಯಕರ್ತರ ವೇತನವನ್ನು 5 ಸಾವಿರ ರೂ.ಗೆ ಏರಿಕೆ ಮಾಡಲಾಗುವುದು," ಎಂದು ಘೋಷಿಸಿದರು.
ಈ ಮೂಲಕ ಖಾನಾಪುರದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹೊಸ ಘೋಷಣೆ ಮಾಡಿದ್ದು, ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಈ ಗ್ಯಾರಂಟಿಗಳೂ ಸೇರಿದೆ. ಇದರಿಂದ ಅಂಗನವಾಡಿ, ಆಶಾ ಕಾರ್ಯಕರ್ತರ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.

ಈಗಾಗಲೇ 2023ರ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಹಲವು ಭರವಸೆಗಳನ್ನು ನೀಡಿದ್ದು, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ, ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ತಿಂಗಳು ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ಪದವೀಧರರಾಗಿದ್ದಾರೆ ಪ್ರತಿ ತಿಂಗಳು 3000 ರೂಪಾಯಿ, ಡಿಪ್ಲೋಮಾ ಮಾಡಿದ್ದರೆ 1500 ರೂಪಾಯಿ ಮತ್ತು ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದಂತಹ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
ಆದರೆ, ಸರ್ಕಾರ ರಚನೆಯಾದ ನಂತರ ಈ ಎಲ್ಲ ಘೋಷಣೆಗಳನ್ನು ಹೇಗೆ ಜಾರಿಗೆ ತರುತ್ತದೆ ಎಂಬುದು ದೊಡ್ಡ ಸವಾಲಾಗಿದೆ. ಈ ಘೋಷಣೆಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಲಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಕೇವಲ ಮತಗಳನ್ನು ಸೆಳೆಯಲು ಈ ರೀತಿ ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಟಾರ್ ಪ್ರಚಾರಕರಾಗಿದ್ದು, ಪಕ್ಷದ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆಯೇ ಎಂಬುದನ್ನು ಕದು ನೋಡಬೇಕಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications