• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚರ್ಚೆ ಇಲ್ಲದೆ ಗೋಹತ್ಯೆ ಪ್ರತಿಬಂಧಕ ವಿಧೇಯಕ ವಾಪಸ್

By Kiran B Hegde
|

ಬೆಳಗಾವಿ, ಡಿ. 20: ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧಿಸಿ ಅನುಮೋದನೆ ಪಡೆದಿದ್ದ ಎರಡು ವಿವಾದಿತ ವಿಧೇಯಕಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ.

ಬಿಜೆಪಿ ಸರ್ಕಾರ 2010ರಲ್ಲಿ ಅನುಮೋದನೆ ಪಡೆದಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಹಾಗೂ 2012ರ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ (ತಿದ್ದುಪಡಿ) ವಿಧೇಯಕ ವಾಪಸ್ ಪಡೆಯಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಸ್ತಾವನೆ ಮಂಡಿಸುತ್ತಿದ್ದಂತೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.

ಕಾಂಗ್ರೆಸ್ ಸರ್ಕಾರದಲ್ಲಿ "ಗೋವಿಗಿಲ್ಲ ರಕ್ಷಣೆ ಭ್ರಷ್ಟರಿಗೆ ಮನ್ನಣೆ" ಎಂದು ಆರೋಪಿಸುತ್ತ ಬಾವಿಗಿಳಿದು ಪ್ರತಿಭಟಿಸಿದರು. ಆದರೆ, ಬಿಜೆಪಿ ಸದಸ್ಯರಿಗೆ ಬೆಲೆಕೊಡದ ಕಾಂಗ್ರೆಸ್ ಸರ್ಕಾರ ಗೋಹತ್ಯೆ ವಿಧೇಯಕ ವಾಪಸ್ ಪಡೆಯುವುದಾಗಿ ಸ್ಪಷ್ಟಪಡಿಸಿತು. ಅಲ್ಲದೆ, 1964ರ ಮೂಲ ಕಾಯ್ದೆಯನ್ನೇ ಮುಂದುವರಿಸಲು ತೀರ್ಮಾನಿಸಿರುವುದಾಗಿ ತಿಳಿಸಿತು.

ಆದರೆ, ಸರ್ಕಾರದ ತೀರ್ಮಾನ ವಿರೋಧಿಸಿದ ಬಿಜೆಪಿ ಹಗರಣದಲ್ಲಿ ಕಳಂಕಿತರಾಗಿರುವ ನಾಲ್ವರು ಸಚಿವರ ಕುರಿತು ಚರ್ಚೆ ನಡೆಸಲು ಅವಕಾಶ ಕೊಡಬೇಕೆಂದು ಆಗ್ರಹಿಸಿ ಧರಣಿ ಆರಂಭಿಸಿತು. ಇತ್ತ ಬಿಜೆಪಿ ಧರಣಿ ನಡೆಸುತ್ತಿದ್ದಂತೆ ಅತ್ತ ಕಾಂಗ್ರೆಸ್ ಸರ್ಕಾರ ಚರ್ಚೆಯನ್ನೇ ನಡೆಸದೆ ಗೋ ಹತ್ಯೆ ಪ್ರತಿಬಂಧಕ ವಿಧೇಯಕವನ್ನು ವಾಪಸ್ ಪಡೆಯಿತು. ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಒಪ್ಪಿಗೆ ಸೂಚಿಸಿತು.

ಆಗ ತಿರುಗೇಟು ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, "ಬಿಜೆಪಿ ಅಧಿಕಾರಕ್ಕೆ ಬಂದಾಗ ಮತ್ತೆ ಗೋಹತ್ಯೆ ಪ್ರತಿಬಂಧಕ ಕಾನೂನು ಜಾರಿಗೆ ತರಲಾಗುವುದು" ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರ ಮಂಡಿಸಿದ್ದ ಈ ವಿಧೇಯಕಗಳಿಗೆ ಅಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅನುಮೋದನೆ ಪಡೆದ ನಂತರ ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು, ವಿಧೇಯಕಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಆದರೆ, ರಾಷ್ಟ್ರಪತಿಗಳು ಒಪ್ಪಿಗೆ ನೀಡಿರಲೇ ಇಲ್ಲ. ಈಗ ಕಾಂಗ್ರೆಸ್ ವಿಧೇಯಕಗಳನ್ನೇ ವಾಪಸ್ ಪಡೆದಿದೆ.

ಚಳಿಗಾಲ ಅಧಿವೇಶನದ ಮೇಲೊಂದು ಪಕ್ಷಿನೋಟ

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನವು ಡಿ. 9ರಿಂದ 20ರ ವರೆಗೆ ಒಟ್ಟು 10 ದಿನಗಳ ಕಾಲ ನಡೆದವು. ಆದರೆ, ವಿಧಾನಸಭೆಯಲ್ಲಿ ಅಧಿವೇಶನ ನಡೆದ ಅವಧಿ ಒಟ್ಟು 55 ಗಂಟೆಗಳು ಮಾತ್ರ.

ಅಧಿವೇಶನದ ಮೊದಲ ದಿನ ಈಚೆಗೆ ನಿಧನ ಹೊಂದಿದ ವಿಧಾನಸಭೆ ಮಾಜಿ ಅಧ್ಯಕ್ಷ ವಿ.ಎಸ್. ಕೌಜಲಗಿ, ಮಾಜಿ ಸಚಿವರಾದ ಜಿ.ಎಸ್. ಅಶ್ವತ್ಥ ರೆಡ್ಡಿ, ಡಾ. ಎಚ್.ಆರ್. ರಾಜು, ಎಸ್.ಬಿ. ನಾಗರಾಳ, ಮಾಜಿ ಶಾಸಕರಾದ ಎಂ.ಎಸ್. ಕಮಲಮ್ಮ, ಕೆ. ಸಿದ್ದಯ್ಯ, ಬಿ.ಆರ್. ನಿಲಕಂಠಪ್ಪ, ಅಣ್ಣಾರಾವ್ ಭೀಮರಾವ್ ಪಾಟೀಲ, ಜಿ. ಶಿವಣ್ಣ, ಎಂ.ಪಿ. ವೆಂಕಟೇಶ, ಸಿ.ಆರ್. ಮೊಹಮ್ಮದ್ ಸೈಫುದ್ದೀನ್, ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ, ವಿಶ್ವವಿಖ್ಯಾತ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಆರ್. ಕೃಷ್ಣ ಅಯ್ಯರ್, ಪತ್ರಕರ್ತ ಎನ್.ಡಿ. ಶಿವಕುಮಾರ ಹಾಗೂ ತಾಲಿಬಾನ್ ದಾಳಿಗೆ ಬಲಿಯಾದ ಪಾಕಿಸ್ತಾದ ಪೇಶಾವರದಲ್ಲಿನ ಸೈನಿಕ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಸಂತಾಪ ಸಲ್ಲಿಸಲಾಯಿತು.

ಅಮೆರಿಕ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಹುದ್ದೆ ಅಲಂಕರಿಸಿದ ಕನ್ನಡಿಗ ಡಾ. ವಿವೇಕ ಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

2014-15 ನೇ ಸಾಲಿನ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಯ 7, 8 ಮತ್ತು 9ನೇ ವರದಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಂಸ್ಥೆಯ ಮೊದಲ ವರದಿ, ಸಾರ್ವಜನಿಕ ಉದ್ದಿಮೆಗಳ ಸಮಿತಿಯ 130ನೇ ವರದಿ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 4ನೇ ವರದಿಗಳನ್ನು ಮಂಡಿಸಲಾಯಿತು. ಎರಡು ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಯಿತು.

ಡಿ. 12ರಂದು ಸದನದಲ್ಲಿ ಅಸಭ್ಯ ಚಿತ್ರವನ್ನು ಮೊಬೈಲ್‍ನಲ್ಲಿ ವೀಕ್ಷಿಸಿದ ಶಾಸಕ ಪ್ರಭು ಚವ್ಹಾಣ್ ಅವರಿಗೆ ಸದನದಿಂದ ಹೊರ ಹೋಗಲು ಹಾಗೂ ಆ ದಿನದ ಕಲಾಪದಲ್ಲಿ ಭಾಗವಹಿಸದಂತೆ ನಿಷೇಧಿಸಲಾಯಿತು. ಮೊಬೈಲ್‌ನಲ್ಲಿ ವಿಡಿಯೋ ವೀಕ್ಷಿಸಿದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ವಸತಿ ಸಚಿವ ಅಂಬರೀಶ್ ಅವರಿಗೆ ಎಚ್ಚರಿಕೆ ನೀಡಲಾಯಿತು. ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಸದನ ಸಮಿತಿ ಶಿಫಾರಸ್ಸಿನಂತೆ ಸದನಲ್ಲಿ ಮೊಬೈಲ್ ಬಳಕೆಯನ್ನು ತಕ್ಷಣದಿಂದ ನಿಷೇಧಿಸಲಾಯಿತು.

ಈ ಅವಧಿಯಲ್ಲಿ ಎರಡು ಹಕ್ಕುಚ್ಯುತಿ ಸೂಚನೆಗಳನ್ನು ಮಂಡಿಸಲಾಯಿತು. ಒಂದು ಸೂಚನೆಯಲ್ಲಿ ಸರ್ಕಾರ ಉತ್ತರ ನೀಡಿ ಇತ್ಯರ್ಥಗೊಳಿಸಿತು. ಎರಡನೆಯ ಸೂಚನೆಯ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಪರಿಶೀಲನೆಗೆ ವಹಿಸಲಾಯಿತು. ಅಧಿಕಾರಿಗಳು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಲಾಯಿತು.

ವಿವಿಧ ಸಚಿವರು ಮಂಡಿಸಿದ ಸಂವಿಧಾನದ 121ನೇ ತಿದ್ದುಪಡಿ ಸ್ಥಿರೀಕರಣ ನಿರ್ಣಯವನ್ನು ಅಂಗೀಕರಿಸಲಾಯಿತು. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿದ ಕರ್ನಾಟಕ ಗೃಹ ಮಂಡಳಿಯಿಂದ ನಡೆದ ಭೂಸ್ವಾಧೀನ ಮತ್ತು ಅಭಿವೃದ್ಧಿ ಹಾಗೂ ನಿವೇಶನ, ಮನೆ, ಪ್ಲಾಟ್‌ಗಳ ಹಂಚಿಕೆಯ ಮೇಲಿನ ಕಾರ್ಯನಿರ್ವಹಣೆ ಲೆಕ್ಕ ಪರಿಶೋಧನಾ ವರದಿಯನ್ನು ಡಿ. 18ರಂದು ಸದನದಲ್ಲಿ ಮಂಡಿಸಲಾಯಿತು.

ಮುಖ್ಯಮಂತ್ರಿಗಳು ಸದನದಲ್ಲಿ ಮಂಡಿಸಿದ 2014-15 ನೇ ಸಾಲಿನ ಎರಡನೇ ಕಂತಿನ ಪೂರಕ ಅಂದಾಜುಗಳನ್ನು ಡಿ. 19ರಂದು ಅಂಗೀಕರಿಸಲಾಯಿತು. 2014-15 ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯಮಾವಧಿ ಪರಿಶೀಲನಾ ವರದಿಯನ್ನು ಸದನದಲ್ಲಿ ಮಂಡಿಸಲಾಯಿತು.

ಒಟ್ಟು 3,202 ಪ್ರಶ್ನೆಗಳ ಸೂಚನಾ ಪತ್ರಗಳನ್ನು ಸ್ವೀಕರಿಸಲಾಗಿದೆ. 2,151 ಪ್ರಶ್ನೆಗಳ ಸೂಚನಾ ಪತ್ರವನ್ನು ಅಂಗೀಕರಿಸಲಾಗಿದೆ. ಈ ಪೈಕಿ 135 ಚುಕ್ಕೆ ಗುರುತಿನ ಪ್ರಶ್ನೆ ಹಾಗೂ 2,017 ಲಿಖಿತವಾಗಿ ಉತ್ತರಿಸಿದ ಪ್ರಶ್ನೆಗಳಿವೆ. 124 ಪ್ರಶ್ನೆಗಳ ಉತ್ತರಗಳನ್ನು ಹಾಗೂ ಲಿಖಿತವಾಗಿ ನೀಡಿದ್ದ 1,837 ಪ್ರಶ್ನೆಗಳ ಉತ್ತರಗಳನ್ನು ಸರ್ಕಾರ ಸ್ವೀಕರಿಸಿದೆ. ಧನವಿಯೋಗ ಒಳಗೊಂಡ ಒಟ್ಟು 14 ವಿಧೇಯಕಗಳನ್ನು ಮಂಡಿಸಲಾಗಿದ್ದು 11 ಅಂಗೀಕಾರವಾಗಿವೆ.

ಕೊನೆ ದಿನ 3 ವಿಧೇಯಕಗಳಿಗೆ ಅಂಗೀಕಾರ

ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿದ್ದ ಮೂರು ವಿಧೇಯಕಗಳನ್ನು ವಿಧಾನ ಪರಿಷತ್ತಿನಲ್ಲಿ ಶನಿವಾರ ಧ್ವನಿ ಮತಕ್ಕೆ ಹಾಕುವ ಮೂಲಕ ಅಂಗೀಕರಿಸಲಾಯಿತು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ 2014ನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕರ್ನಾಟಕ ಮರಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ 2014ನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಹಾಗೂ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಅಧಿನಿಯಮ 2014ನ್ನು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ವಿಧಾನ ಪರಿಷತ್‌ನಲ್ಲಿ ಮಂಡಿಸಿದರು.

ನಂಜುಂಡಪ್ಪ ವರದಿ ಶಿಫಾರಸ್ಸಿಗೆ ಸರ್ಕಾರ ಬದ್ಧ

ನಂಜುಂಡಪ್ಪ ವರದಿ ಶಿಫಾರಸ್ಸುಗಳನ್ನು ಜಾರಿಗೆ ತರಲು ಬದ್ಧವಾಗಿದೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ಶನಿವಾರ ತಿಳಿಸಿದ್ದಾರೆ.

ಇನ್ನು ಐದು ವರ್ಷಗಳಲ್ಲಿ ಹೈದರಾಬಾದ್ ಕರ್ನಾಟಕದಲ್ಲಿರುವ ಅಸಮಾನತೆ ಹೋಗಲಾಡಿಸಲಾಗುವುದು. ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶದಿಂದ ನೀರಾವರಿಗಾಗಿಯೇ ಪ್ರತಿವರ್ಷ ಕನಿಷ್ಠ 10 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುವುದು. ಸರ್ಕಾರ ಜಾರಿಗೆ ತಂದಿರುವ ಹೊಸ ಕೈಗಾರಿಕಾ ನೀತಿಯಡಿ ಹೆಚ್ಚು ಕೈಗಾರಿಕೆಗಳು ಈ ಭಾಗದ ಜನರಿಗೆ ಲಭಿಸಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರೈತರಿಂದ ಭತ್ತ, ರಾಗಿ, ಜೋಳ ಹಾಗೂ ಮೆಕ್ಕೆ ಜೋಳ ಖರೀದಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ 10ನೇ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕ ಶಿವಲಿಂಗೇಗೌಡರ ಆರೋಗ್ಯ ವಿಚಾರಿಸಿದ ಸಿಎಂ

ಶಾಸಕ ಶಿವಲಿಂಗೇಗೌಡರ ಆರೋಗ್ಯ ವಿಚಾರಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಆರೋಗ್ಯ ವಿಚಾರಿಸಿದರು.

ಕಲಾವಿದ ಅಬ್ದುಲಸಾಬ್‌ಗೆ ರಾಜ್ಯೋತ್ಸವ ಪ್ರಶಸ್ತಿ ವಿತರಣೆ

ಕಲಾವಿದ ಅಬ್ದುಲಸಾಬ್‌ಗೆ ರಾಜ್ಯೋತ್ಸವ ಪ್ರಶಸ್ತಿ ವಿತರಣೆ

ಕರ್ನಾಟಕ ವೃತ್ತಿ ರಂಗ ಭೂಮಿಯ ಕಲಾವಿದ ಅಬ್ದುಲಸಾಬ್ ಅಣ್ಣಿಗೇರಿ ಅವರಿಗೆ 2014ರ ರಾಜ್ಯೋತ್ಸವ ಪ್ರಶಸ್ತಿಯನ್ನು ಸುವರ್ಣ ಸೌಧದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರದಾನ ಮಾಡಿದರು.

ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆ

ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆ

ಸರ್ಕಾರಿ ಮುದ್ರಣಾಲಯ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುವರ್ಣ ಸೌಧದಲ್ಲಿ ಬಿಡುಗಡೆ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress government has decided to get back 2 bills regarding cow slaughter ban. Government will present the proposal on Saturday regarding getting back bills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more