Belagavi: ಪೋಷಕರ ಪಾದಪೂಜೆ ಮಾಡಿದ ಶಾಲಾ ಮಕ್ಕಳು- ಬೆಳಗಾವಿಯಲ್ಲಿ ಅಪರೂಪದ ಕಾರ್ಯಕ್ರಮ
ಬೆಳಗಾವಿ ಮಾರ್ಚ್ 4: ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಕಡೆಗಣಿಸುವುದು, ಆಶ್ರಮಗಳಲ್ಲಿ ಬಿಡುವುದು, ಅವರ ಮನಸ್ಸನ್ನು ನೋಯಿಸುವುದು ಹೆಚ್ಚಾಗಿದೆ. ಹೀಗಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಪೋಷಕರ ಬಗ್ಗೆ ಪ್ರೀತಿ ಗೌರವ ಮೂಡಿಸಲು ಶಾಲೆಯೊಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರ ಗಮನ ಸೆಳೆದಿದೆ.
ಹೌದು.. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ತಮ್ಮ ತಂದೆ-ತಾಯಿ ಪಾದಪೂಜೆ ಮಾಡಿದರು. ಕಾಣಿಸದ ದೇವರಿಗಿಂತ ಕಾಣಿಸುವ ತಂದೆ ತಾಯಿ ಶ್ರೇಷ್ಠ ಅನ್ನೋ ಹಾಗೆ ಮಕ್ಕಳು ತಮ್ಮ ತಂದೆ-ತಾಯಿಯ ಪೂಜೆ ಮಾಡಿದ್ದಾರೆ. ಸರ್ಕಾರಿ ಶಾಲೆಯ ಈ ವಿನೂತನ ಕಾರ್ಯಕ್ರಮ ಎಲ್ಲರ ಮನೆ ಮಾತಾಗಿದೆ.

ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಪೋಷಕರ ಬಗ್ಗೆ ಗೌರವ ಹಾಗೂ ಪ್ರೀತಿ ಮೂಡಿಸುವುದು ತುಂಬಾ ಮುಖ್ಯ. ತಂದೆ-ತಾಯಿಯ ಶ್ರಮ ಅವರಿಗೆ ಅರ್ಥವಾಗಬೇಕಿದೆ. ಸಂಸ್ಕಾರ ತಿಳಿಯದೆ ಬೆಳೆದ ಮಕ್ಕಳು ತಂದೆ-ತಾಯಿಯನ್ನು ಕಡೆಗಣಿಸುವುದು, ನಿಂದಿಸುವುದು, ಅವರ ಮೇಲೆ ಕೈ ಮಾಡುವುದು, ಬೇಸರ ಮಾಡುವಂತಹ ಘಟನೆಗಳು ನಡೆಯುತ್ತಿವೆ. ಹೀಗಾಗಿ ಪೂಜೆ, ದೇವಸ್ಥಾನ, ಗುಡಿ ಗುಂಡಾರಗಳನ್ನು ಸುತ್ತುವ ಬದಲು ಮಕ್ಕಳಿಗೆ ಪ್ರತ್ಯೆಕ್ಷ ದೇವರಾದ ತಂದೆ-ತಾಯಿಯನ್ನು ಪೂಜನೀಯ ಭಾವದಿಂದ ನೋಡುವುದನ್ನು ಕಲಿಸಬೇಕಿದೆ.
ಈ ಸದುದ್ದೇಶದಿಂದ ಕಲ್ಲೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳಿಂದ ಪೋಷಕರ ಪಾದಪೂಜೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾಲೆಯಲ್ಲಿ ಮಕ್ಕಳು ತಮ್ಮ ಪೋಷಕರನ್ನು ಕಣ್ಣಿಗೆ ಕಾಣುವ ದೇವರೆಂದು ಪೂಜೆ ಮಾಡಿದ್ದಾರೆ.
ಶಾಲೆಯ ಮೈದಾನದಲ್ಲಿ ಎಲ್ಲಾ ಮಕ್ಕಳ ತಂದೆ-ತಾಯಿಯನ್ನು ಖುರ್ಚಿಯ ಮೇಲೆ ಸಾಲಾಗಿ ಕೂಡಿಸಿ, ಮಕ್ಕಳು ಪಾದ ಪೂಜೆ ಮಾಡಿದರು. ತಟ್ಟೆಯಲ್ಲಿ ತಂದೆ ಹಾಗೂ ತಾಯಿಯ ಪಾದಗಳನ್ನು ಇರಿಸಿ ತೊಳೆದು ಅರಸಿನ ಕುಂಕುಮ ಹಚ್ಚಿ ಆರತಿ ಬೆಳಗಿಸಿ, ತಂದೆ ತಾಯಿಯ ಪಾದಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಿದಾನಂದ ಭಾರತಿ ಸ್ವಾಮೀಜಿ, 'ಮಕ್ಕಳಿಗೆ ತಂದೆ-ತಾಯಿ ಅಂದರೆ ದೇವರು. ಮಕ್ಕಳು ಎಷ್ಟೇ ದೊಡ್ಡವರಾದರೂ ಕೂಡ ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯವಾಗಿದೆ' ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಪಿಎಸ್ ಕಾಂಬಾಳೆ.' ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳು ವಯಸ್ಸಾದ ಹೆತ್ತ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು, ಮನೆ ಬಿಟ್ಟು ಹೊರಗಡೆ ಹಾಕುವುದು ಸೇರಿದಂತೆ ಹೆತ್ತವರ ಮನಸ್ಸು ನೋಯಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಭಾವನೆಗಳನ್ನು ದೂರ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ತಂದೆ-ತಾಯಿಯ ಬಗ್ಗೆ ಮಕ್ಕಳಿಗೆ ಪೂಜ್ಯನೀಯ ಭಾವನೆ ಗೌರವ ಮೂಡುವಂತೆ ಮಾಡುವುದೇ ಕಾರ್ಯಕ್ರಮದ ಮೂಲ ಉದ್ದೇಶ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಪೋಷಕರು ಬಗ್ಗೆ ಪೂಜ್ಯನಿಯ ಭಾವನೆ ಗೌರವ ಮೂಡುವಂತೆ ಮಾಡಲು ಶಾಲೆಯಲ್ಲಿ ಇಂತಹ ಅಪರೂಪದ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದರಿಂದ ಮಕ್ಕಳು ಪೋಷಕರ ನಡುವಿನ ಸಂಬಂಧ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.












Click it and Unblock the Notifications