ಬೆಳಗಾವಿಯಲ್ಲಿ ಬಿಎಸ್‌ವೈ, ಸಿದ್ದರಾಮಯ್ಯ, ಡಿಕೆಶಿ ಭೇಟಿ
ಬೆಂಗಳೂರು, ಡಿಸೆಂಬರ್ 5: ಬೆಳಗಾವಿಯ ಬಿಜೆಪಿ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲು ತೆರಳಿದ್ದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿರುದ್ಧ ಕರ್ನಾಟಕ ಬಂದ್ ನಡೆಯುವ ವೇಳೆಯಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಾಯಕರು ಪರಸ್ಪರ ಭೇಟಿಯಾಗಿ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಆದರೆ ಈ ನಾಯಕರ ಭೇಟಿ ವೇಳೆ ಯಾವ ವಿಚಾರಗಳು ಚರ್ಚೆಯಾದವು ಎನ್ನುವುದು ಬಹಿರಂಗವಾಗಿಲ್ಲ.
ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭೇಟಿ ನಡೆದಿದೆ.

ಬಿಜೆಪಿ ರಾಜ್ಯ ಕಾರ್ಯಕಾರಣಿ ನಿಮಿತ್ತ ಸಿಎಂ ಬೆಳಗಾವಿಗೆ ತೆರಳಿದ್ದರು. ಹಾಗೆ ಬಾಗಲಕೋಟೆಯ ತೇರದಾಳದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಹಾಗು ಡಿಕೆಶಿ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗಿದರು. ಆಗ ಬೆಳಗಾವಿ ನಿಲ್ದಾಣದಲ್ಲಿ ಉಭಯ ಪಕ್ಷಗಳ ನಾಯಕರು ಭೇಟಿ ಆದರು.
ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವುದಾಗಿ ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಪ್ರತಿ ತಿಂಗಳು ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುತ್ತಾ ಬಂದಿದೇವೆ. ಈ ಬಾರಿ ಕಾರ್ಯಕಾರಿಣಿಯಲ್ಲಿ ಎರಡು ನಿರ್ಣಯ ಕೈಗೊಂಡಿದ್ದೇವೆ. ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿ ಮಾಡುವುದು ಮತ್ತು ಗೋಹತ್ಯೆ ನಿಷೇಧ, ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ' ಎಂದು ಕಟೀಲ್ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆಯು ಕಾರ್ಯಕರ್ತರ ಚುನಾವಣೆಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಪೇಕ್ಷಿತ ಕಾರ್ಯಕರ್ತರಿಗೆ ನಾಯಕರು ಬೆಂಬಲ, ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಹಳ ವ್ಯವಸ್ಥಿತವಾಗಿ, ಯಶಸ್ವಿಯಾಗಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದೆ ಎಂದು ಹೇಳಿದರು.












Click it and Unblock the Notifications