ಆರು ದಿನದ ನಂತರ ಗುಡ್ಡದಿಂದ ಈಜಿ ಬಂದು ಸಾವು ಗೆದ್ದ
ಬೆಳಗಾವಿ, ಆಗಸ್ಟ್ 8: ಎಂದಿನಂತೆ ಮಾಧವಾನಂದ ಅಂದು ಕೂಡ ದನ ಕಾಯಲು ಗುಡ್ಡಕ್ಕೆ ಹೋಗಿದ್ದ. ದನಕರುಗಳನ್ನು ಅಲ್ಲಿ ಬಿಟ್ಟು ಬಂದು ಸಂಜೆ ಅವುಗಳನ್ನು ಮತ್ತೆ ಹಟ್ಟಿಗೆ ಕರೆತರಲು ಹೋಗಿದ್ದಾನೆ. ಆದರೆ ಇನ್ನೇನು ಅವುಗಳನ್ನು ಕರೆದುಕೊಂಡು ಬರಬೇಕು ಎನ್ನುವಷ್ಟರಲ್ಲಿ ನೋಡನೋಡುತ್ತಿದ್ದಂತೆ ಗುಡ್ಡದ ಸುತ್ತ ನೀರು ಆವರಿಸಿತ್ತು. ಕ್ಷಣಮಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಗಾಬರಿಯಾದ ಆತ ಏನು ಮಾಡಲೂ ತೋಚದೆ ಅಲ್ಲೇ ಉಳಿದುಕೊಂಡ.
ಇದು ಆರು ದಿನಗಳ ಹಿಂದಿನ ಕಥೆ. ನೀರು ಈಗ ಇಳಿಯಬಹುದು, ಆಗ ಇಳಿಯಬಹುದು ಎಂದು ಕಾಯುತ್ತಿದ್ದ ಆತನಿಗೆ ನೀರು ಇಳಿಯುವ ಯಾವ ಸೂಚನೆಯೂ ಸಿಗಲಿಲ್ಲ. ಹೀಗಾಗಿ ಪ್ರವಾಹಕ್ಕೆ ಹೆದರಿ ಗುಡ್ಡದ ಗುಹೆಯಲ್ಲೇ ಆರು ದಿನಗಳಿಂದ ಉಳಿದುಕೊಂಡಿದ್ದ.
ಗೋಕಾಕ ತಾಲೂಕಿನ ಯೋಗಿಕೊಳ್ಳದ ಮಾಧವಾನಂದ ದೊಡ್ಡಮನಿ ಎಂಬ ಆ ಯುವಕ ಈಗ ತಾನೇ ಈಜಿಕೊಂಡು ಬಂದಿದ್ದಾನೆ.

ಧೋ ಎಂದು ಸುರಿಯುವ ಮಳೆ ನಡುವೆ ಹಗಲು ರಾತ್ರಿ ಎನ್ನದೇ, ಬೆಟ್ಟದ ಮೇಲೆ ನಡುಗುತ್ತಲೇ ಊಟ ತಿಂಡಿ ಏನೂ ಇಲ್ಲದೇ ಆರು ದಿನಗಳನ್ನು ಕಳೆದಿದ್ದಾನೆ. ಸಹಾಯಕ್ಕೆ ಕರೆಯಲೂ ಯಾರೂ ಇಲ್ಲ, ಕರೆದರೂ ಕೇಳುವುದಿಲ್ಲ ಎಂಬುದನ್ನು ಅರಿತು ನೀರು ಇಳಿಯುವುದನ್ನೇ ಕಾದು ಕುಳಿತಿದ್ದಾನೆ. ಆದರೂ ಪ್ರಯೋಜನವಾಗಿಲ್ಲ.
ಹೀಗೆ ಕಾಯುತ್ತ ಕೂತರೂ ಉಪಯೋಗವಿಲ್ಲ ಎಂದು ಅರಿತು ಧೈರ್ಯದಿಂದ, ಮನಸ್ಸು ಗಟ್ಟಿಮಾಡಿಕೊಂಡು ನೀರಿಗೆ ಜಿಗಿದಿದ್ದಾನೆ 23 ವರ್ಷದ ಮಾಧವಾನಂದ. ತುಂಬಿ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಸುಮಾರು 2 ಕಿಲೋ ಮೀಟರ್ ವರೆಗೂ ಈಜಿ ಕೊನೆಗೂ ಜನರಿದ್ದ ಜಾಗವನ್ನು ತಲುಪಿದ್ದಾನೆ. ತನ್ನ ಜೀವವನ್ನು ತಾನೇ ಉಳಿಸಿಕೊಂಡಿದ್ದಾನೆ.












Click it and Unblock the Notifications