ಗಡಿ ವಿವಾದ: ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿ ಸರಿಯಲ್ಲ:ಸಿಎಂ
ಬೆಂಗಳೂರು, ಡಿಸೆಂಬರ್ 02: ಮಹಾರಾಷ್ಟ್ರದ ಇಬ್ಬರು ಸಚಿವರು ವಿವಾದದ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದು ಸರಿಯಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಶುಕ್ರವಾರ ಮಾತನಾಡಿದ ಅವರು, ಮಹರಾಷ್ಟ್ರ ರಾಜ್ಯದ ಇಬ್ಬರು ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ತಮ್ಮ ಕಾನೂನು ತಂಡದೊಂದಿಗೆ ಗಡಿ ಸಮಸ್ಯೆಯನ್ನು ನಿಭಾಯಿಸಲು ಸದ್ಯ ನೇಮಕವಾಗಿದ್ದಾರೆ. ಆದರೆ ಇವರು ಸಮಸ್ಯೆ ಕುರಿತಾಗಿ ಗಡಿಭಾಗದ ಜಿಲ್ಲೆ ಮತ್ತು ವಿವಾದ ಕೇಂದ್ರವಾಗಿರುವ ಬೆಳಗಾವಿಗೆ ಭೇಟಿ ನೀಡಲು ಯೋಜಿಸಿದ್ದಾರೆ.
ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ಆಂದೋಲನದ ನೇತೃತ್ವ ವಹಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರನ್ನು ಈ ಇಬ್ಬರೂ ಸಚಿವರು ಭೇಟಿಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ ಎಂದರು.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್
ಬೆಳಗಾವಿ ಗಡಿ ವಿವಾದ, ಕರ್ನಾಟಕಕ್ಕೆ ಕೆಲವು ಗ್ರಾಮಗಳ ಸೇರ್ಪಡೆ ಸೇರಿದಂತೆ ಒಟ್ಟಾರೆ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಅರ್ಜಿಯ ವಿಚಾರಣೆ ನಡೆದಾಗಲೂ ಸಚಿವ ಭೇಟಿ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಈಗಾಗಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಪತ್ರ ಬರೆದು ತಿಳಿಸಿದ್ದಾರೆ.
ಕರ್ನಾಟಕದ ಹಿಂದಿನ ಕ್ರಮ ಮುಂದುವರಿಯಲಿವೆ
ಗಡಿ ವಿಚಾರ ಭುಗಿಲೆದ್ದಿರುವಾಗ ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಗಡಿ ಜಿಲ್ಲೆಗೆ ಭೇಟಿ ನೀಡುವುದು ಸರಿಯಲ್ಲ. ಆದ್ದರಿಂದ ಸಚಿವರ ಭೇಟಿ ನೀಡಬಾರದು. ಕರ್ನಾಟಕ ಸರ್ಕಾರ ಈಗಾಗಲೇ ಅವರೊಂದಿಗೆ ಈ ಬಗ್ಗೆ ಮಾತನಾಡಲು ಪ್ರಯತ್ನಿಸಿದ್ದೇವೆ. ಅಲ್ಲದೇ ಕರ್ನಾಟಕ ಸರ್ಕಾರ ಈ ಹಿಂದೆ ತೆಗೆದುಕೊಂಡ ಕ್ರಮಗಳನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಸ್ಪಷ್ಟ ಪಡಿಸಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯಲ್ಲಿರುವ ಜತ್ತ ತಾಲೂಕಿನಲ್ಲಿ ಕುಡಿಯುವ ನೀರಿನ ಯೋಜನೆ ಆಗಬೇಕಿದೆ. ಜತ್ತ ತಾಲೂಕಿನಲ್ಲಿ ಕನ್ನಡ ಮಾತನಾಡುವ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕುಡಿಯುವ ನೀರಿನ ಯೋಜನೆ ರೂಪಿಸುವುದಾಗಿ ಹೇಳಿದೆ. ಆ ಯೋಜನೆ ಯಶಸ್ವಿಯಾಗಲಿ, ಅಲ್ಲಿನ ಜನರಿಗೆ ಕುಡಿಯುವ ನೀರು ದೊರೆಯಲಿದೆ ಎಂದು ಅವರ ಹೇಳಿದರು.

ಜತ್ತ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಬವಣೆ ಹೇಳ ತೀರದಾಗಿದೆ. ಜತ್ತ ತಾಲ್ಲೂಕಿನ ಪಂಚಾಯತಿಗಳು ತಮ್ಮ ತಾಲೂಕನ್ನು ಕರ್ನಾಟಕದ ಜೊತೆಗೆ ವಿಲೀನಗೊಳಿಸುವಂತೆ ಕೇಳಿಕೊಂಡ ಮನವಿಯನ್ನು ಪರಿಗಣಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ ನೋಡುವ ಜೊತೆಗೆ ಅವರ ನೀರ್ಣಯನ್ನು ಮರುಪರಿಶೀಲಿಸಲಾಗುವುದು ಎಂದು ತಿಳಿಸಿದರು.