ಬೆಳಗಾವಿಯಲ್ಲಿ ಸಿಕ್ಕ ಅಪರಿಚಿತ ಶವದ ಗುರುತು ಪತ್ತೆ
ಬೆಳಗಾವಿ, ನವೆಂಬರ್ 02 : ಬೆಳಗಾವಿಯಲ್ಲಿ ಸಿಕ್ಕ ಅಪರಿಚಿತ ಶವದ ಗುರುತು ಪತ್ತೆಯಾಗಿದೆ. ಅಪರಿಚಿತ ಶವ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಕೊಂದ ವ್ಯಕ್ತಿಯದ್ದಲ್ಲ ಎಂದ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 28ರಂದು ಖಾನಾಪುರ ತಾಲ್ಲೂಕಿನ ಮಾಣಿಕವಾಡಿಯಲ್ಲಿ ಶವ ಪತ್ತೆಯಾಗಿತ್ತು.
ಭಾನುವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಐಡಿ ಡಿಐಜಿ ಹೇಮಂತ ನಿಂಬಾಳ್ಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು, 'ಮಾಣಿಕವಾಡಿಯಲ್ಲಿ ಪತ್ತೆಯಾದ ಶವ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯ ರೇಖಾಚಿತ್ರಕ್ಕೆ ಹೋಲಿಕೆಯಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು. [ಕಲಬುರ್ಗಿ ಕೊಂದವ ಶವವಾಗಿ ಪತ್ತೆ?]

'ಪತ್ತೆಯಾದ ಶವ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ಮಹಾಂತೇಶ ಚಿದಾನಂದ ಶಿರೋಳೆ ಎಂಬುವವರದ್ದು. ಮಹಾಂತೇಶ ಅವರ ಸಹೋದರ ಇತರರ ಜೊತೆ ಸೇರಿ ಈ ಕೊಲೆ ಮಾಡಿದ್ದ. ಈ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಮಾಹಿತಿ ನೀಡಿದರು. [ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?]
ಬಂಧಿತ ಆರೋಪಿಗಳು : ಮಹಾಂತೇಶ ಅವರ ಕೊಲೆಗೆ ಸಂಬಂಧಿಸಿದಂತೆ ಆತನ ಸಹೋದರ ನಂದಕುಮಾರ ಚಿದಾನಂದ ಶಿರೋಳೆ, ಸೋದರ ಸಂಬಂಧಿ ಉದಯ ಶಿರೋಳೆ, ಮಲ್ಲಿಕಾರ್ಜುನ ಕೋಟಗಿ ಹಾಗೂ ಮಂಜುನಾಥ ಹೊಸೂರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. [ಗೋವಾದಿಂದ ಕರೆತಂದು ಬೆಳಗಾವಿಯಲ್ಲಿ ಕೊಲೆ ಮಾಡಿದ್ರು]
ಪೊಲೀಸರ ಸ್ಪಷ್ಟನೆ : 'ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಗೂ ಮಹಾಂತೇಶ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳಂತೆ ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಆರೋಪಿಯ ರೇಖಾ ಚಿತ್ರಕ್ಕೂ ಈ ಶವಕ್ಕೂ ಹೋಲಿಕೆ ಕಂಡುಬಂದಿಲ್ಲ' ಎಂದು ಪೊಲೀಸರು ಹೇಳಿದರು.
ಮಹಾಂತೇಶ ಹತ್ಯೆ ಏಕೆ? : ಚಿಕ್ಕೋಡಿ ಸೇರಿದಂತೆ ವಿವಿಧ ಕಡೆ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಮಹಾಂತೇಶ ಎರಡು ವರ್ಷಗಳಿಂದ ಜೈಲಿನಲ್ಲಿದ್ದು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಮನೆಗೆ ಬಂದ ಬಳಿಕ ಆತ ತನ್ನ ತಾಯಿ ಹಾಗೂ ಚಿಕ್ಕಪ್ಪನಿಗೆ ಚಿತ್ರ ಹಿಂಸೆ ನೀಡುತ್ತಿದ್ದ.
ಈ ವಿಷಯ ತಿಳಿದು ದುಬೈನಲ್ಲಿ ಕೆಲಸ ಮಾಡುತ್ತಿದ್ದ ನಂದಕುಮಾರ ಊರಿಗೆ ವಾಪಸ್ ಬಂದು ಮಹಾಂತೇಶನ ಹತ್ಯೆಗೆ ಸಂಚು ರೂಪಿಸಿದ್ದ. ಗೋವಾಕ್ಕೆ ಪ್ರವಾಸ ಹೋಗೋಣ ಎಂದು ಮಹಾಂತೇಶನನ್ನು ನಂದಕುಮಾರ, ಉದಯ, ಮಲ್ಲಿಕಾರ್ಜುನ, ಮಂಜುನಾಥ ಅವರು ಅಕ್ಟೋಬರ್ 17ರಂದು ಕರೆದುಕೊಂಡು ಹೋಗಿದ್ದರು.
ಮಹಾಂತೇಶನಿಗೆ ಮದ್ಯ ಕುಡಿಸಿ, ಮಾಣಿಕವಾಡಿ ಬಳಿ ಕರೆದೊಯ್ದು ಕಾರಿನಿಂದ ಕೆಳಗಿಳಿಸಿ ಆತನ ಮೇಲೆ ನಾಡಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಬಳಿಕ ದಾಂಡೇಲಿ, ಧಾರವಾಡ ಮಾರ್ಗವಾಗಿ ಯರಗಟ್ಟಿಗೆ ಬಂದು ಊರು ಸೇರಿಕೊಂಡಿದ್ದರು.
ಆರೋಪಿ ನಂದಕುಮಾರ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ ನೌಕರನ ಸಹಾಯದಿಂದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರಿಗೆ 30 ಸಾವಿರ ಹಣ ನೀಡಿ ನಾಡ ಪಿಸ್ತೂಲ್ ಮತ್ತು 4 ಗುಂಡುಗಳನ್ನು ಖರೀದಿ ಮಾಡಿದ್ದರು. ಆರೋಪಿಗಳಿಂದ ಮೊಬೈಲ್, ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications