ಅಕ್ಕ ಇವತ್ತು ಒಂದು ಪೆಗ್ ಹೆಚ್ಚು ಕುಡಿಯಬೇಕಾಗುತ್ತದೆ: ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ನಾಯಕರ ಪರಮನೀಚ ಹೇಳಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ನಾಯಕ ಪರಮನೀಚ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್ ಅವರು ತಮ್ಮ ಭಾಷಣದಲ್ಲಿ ನಾಲಿಗೆ ಹರಿಬಿಟ್ಟಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲ ನೋಡಿದರೆ 'ಅಕ್ಕ' ನಿದ್ದೆಗೆಡುತ್ತಾರೆ. ಅವರು ನಿದ್ದೆ ಮಾಡಲು ಮಾತ್ರೆ ತೆಗೆದುಕೊಳ್ಳಬೇಕು ಅಥವಾ ಒಂದು 'ಪೆಗ್' ಹೆಚ್ಚಾಗಿ ಕುಡಿಯಬೇಕು ಎಂದು ಸಂಜಯ ಪಾಟೀಲ್ ಹೇಳಿದ್ದಾರೆ. ಭಾಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಹೇಳದೇ ಇದ್ದರೂ, ಮೂದಲಿಸಿದ್ದು ಮಾತ್ರ ಅವರನ್ನೇ ಎಂದು ಅರ್ಥವಾಗಗುತ್ತದೆ.

ಶನಿವಾರ ಹಿಂಡಲಗಾದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುವ ಸಂದರ್ಭದಲ್ಲಿ ಸಂಜಯ ಪಾಟೀಲ ಅವರು ಈ ಹೇಳಿಕೆ ನೀಡಿದ್ದಾರೆ.
ತಮ್ಮ ಭಾಷಣದ ವೇಳೆ, ಅಕ್ಕನ ಕ್ಷೇತ್ರದಲ್ಲಿ ಬಿಜೆಪಿ ಸಮಾವೇಶಕ್ಕೆ ಅಪಾರ ಸಂಖ್ಯೆಯ ಮಹಿಳೆಯರು ಸೇರಿರುವುದು ನೋಡಿದರೆ, ಅಕ್ಕ ನಿದ್ದೆಗೆಡುವುದು ಗ್ಯಾರಂಟಿ ಎಂದು ಸಂಜಯ್ ಪಾಟೀಲ್ ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಸಂಜಯ್ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ಬಿಜೆಪಿ ನಾಯಕರಿಗೆ ಮಹಿಳೆಯರು, ಮಹಿಳಾ ಕುಲದ ಮೇಲೆ ಇರುವ ಗೌರವ ಎಷ್ಟು ಎನ್ನುವುದನ್ನು ಅವರ ಈ ಹೇಳಿಕೆ ತೋರಿಸುತ್ತದೆ. ಮಹಿಳಾ ಕುಲಕ್ಕೆ ಬಿಜೆಪಿ ನೀಡುವ ಗೌರವ ಇದೇನಾ? ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications