ಸಿಡಿ ಪ್ರಕರಣಕ್ಕೆ ತಿರುವು; ಯುವತಿ ಅಪಹರಣ ಎಂದು ದೂರು
ಬೆಳಗಾವಿ, ಮಾರ್ಚ್ 16; ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸಿಡಿಯಲ್ಲಿರುವ ಸಂತ್ರಸ್ತ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ಸಿಡಿಯಲ್ಲಿರುವ ಯುವತಿಯ ತಂದೆ ಪ್ರಕಾಶ್ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ.

ಯುವತಿ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು 363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹಾಸ್ಟೆಲ್‌ನಲ್ಲಿದ್ದಾಗ ಪುತ್ರಿಯನ್ನು ಅಪಹರಣ ಮಾಡಿದ್ದಾರೆ. ಆಕೆಗೆ ಹೆದರಿಸಿ, ಕಿರುಕುಳ ನೀಡಿ ಸಿಡಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಯುವತಿ ಇನ್ನೂ ಹಾಜರಾಗಿ ಹೇಳಿಕೆ ನೀಡಿಲ್ಲ. ಭಾನುವಾರ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿಯ ಮನೆ ಮುಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಹೇಳಿಕೆ ನೀಡಲು ಆಗಮಿಸಬೇಕು ಎಂದುದ ನೋಟಿಸ್ ಅಂಟಿಸಿದ್ದರು.
ಯುವತಿ ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದಾಳೆ. ಯುವತಿ ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಳು. ಮಾಜಿ ಸಚಿವರಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ್ದಳು.












Click it and Unblock the Notifications